ದೇಶೀಯ ಆಟವಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

sports.jpg
Published on

ದಾವಣಗೆರೆ : ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ದೇಶೀಯ ಆಟಗಳ ಕಲರವ ತುಂಬಿತ್ತು. ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ ಹಾಗೂ ಕುಂಟಬಿಲ್ಲೆ ಆಡುವ ಮೂಲಕ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
 ಸ್ನೇಹಿತರೊಂದಿಗೆ ಆಟದಲ್ಲಿ ಪಾಲ್ಗೊಂಡು ಕೇಕೆ ಹಾಕಿ ಸಂಭ್ರಮಿಸಿದರು. ಆಟಗಾರರ ಜತೆಗೆ ವೀಕ್ಷಕರು ಸಹ ಕ್ಷಣಕಾಲ ತಮ್ಮ ಬಾಲ್ಯದ ನೆನಪುಗಳಿಗೆ ಜಾರಿದರು.
 ಜೆಜೆಎಂ ಮೆಡಿಕಲ್ ಕಾಲೇಜು ‘ಮಾನ್ಸೂನ್ ಫಿಯಸ್ಟ’ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊರಾಂಗಣ ದೇಶೀಯ ಆಟಗಳ ಕ್ರೀಡಾಕೂಟಕ್ಕೆ ಪಾಲಿಕೆ ಸದಸ್ಯ ಎ. ನಾಗರಾಜ್ ಚಾಲನೆ ನೀಡಿದರು.
 ನಂತರ ಮಾತನಾಡಿದ ನಾಗರಾಜ್, ಮೊಬೈಲ್ ಹಾಗೂ ಟಿವಿ ಆಟದಲ್ಲಿ ಮುಳುಗಿರುವ ಯುವಜನತೆಗೆ ದೇಶೀಯ ಕ್ರೀಡೆಗಳನ್ನು ಆಯೋಜಿಸುವುದು ತುಂಬಾ ಅವಶ್ಯಕ. ಈ ಆಟಗಳು ನನಗೆ ಸಂತೋಷದ ಜತೆಗೆ ಬಾಲ್ಯದ ದಿನ ನೆನಪಿಸಿವೆ ಎಂದು ಹೇಳಿದರು.
 ಯೋಗ ಗುರು ಮಂಜುನಾಥ್ ಮಾತನಾಡಿ, ಇಂತಹ ಆಟಗಳನ್ನು ಆಡುವುದರಿಂದ ನರ ರೋಗಗಳು ಬಾರದಂತೆ ತಡೆಯಬಹುದು ಎಂದು ತಿಳಿಸಿದರು.
 ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್ ಮಾತನಾಡಿ, ಇಂತಹ ಆಟಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗೋಲಿ, ಬುಗುರಿಯಂತಹ ಕ್ರೀಡೆಗಳಿಂದ ಮಿದುಳು ಚುರುಕುಗೊಂಡು ದೃಷ್ಟಿ ಉತ್ತಮವಾಗುತ್ತದೆ. ದೇಶೀಯ ಆಟಗಳಿಂದ ಲಭಿಸುವ ದೈಹಿಕ ಹಾಗೂ ಮಾನಸಿಕ ಉಪಯೋಗ ಎಲ್ಲರಿಗೂ ತಿಳಿಸುವುದು ಕ್ರೀಡಾಕೂಟದ ಮುಖ್ಯ ಉದ್ದೇಶ ಎಂದು ಹೇಳಿದರು.
 ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಆಟಗಳ ನಿರ್ವಹಣೆ ಮಾಡಿದರು. ವಿದ್ಯಾರ್ಥಿ ಸಂಘದ ಕ್ರೀಡಾ ಸಮಿತಿಯ ಆಸ್ಟಿನ್, ಚಂದನ್, ನಿರೀಕ್ಷಾ, ಮಹಾಲಕ್ಷ್ಮೀ, ನಿಖಿಲ್, ಶ್ರೀದೀಪ್ ಕೈಜೋಡಿಸಿದರು.
 ಯೋಗ ಗುರು ಗೀತಮ್ಮ, ಕಾಲೇಜಿನ ಪ್ರೊಫೆಸರ್‌ಗಳಾದ ಡಾ.ಮಂಜುನಾಥ್ ತೆಂಬದ್, ಡಾ. ಶಿವಕುಮಾರ್ ಇದ್ದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಾತ್ವಿಕ್ ಅರಸ್ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net