

ದಾವಣಗೆರೆ : ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಸಂವೇದ ಶಾಲೆ ವಿದ್ಯಾರ್ಥಿ ಎಂ.ಎಸ್.ಸುಶ್ರುತ್ ಅವರಿಗೆ ಜು.26 ರಂದು ಕುವೆಂಪು ಕನ್ನಡ ಭ ವನದಲ್ಲಿ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬರ್ಲಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನಲ್ಲಿ 5 ಕಿ.ಮೀ. ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಂ.ಎಸ್. ಸುಶ್ರುತ್ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಶಾಲೆ ಮುಖ್ಯ ಶಿಕ್ಷಕ ಎಸ್.ನಾಗರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಾರ್ಯಕ್ರಮ ಉದ್ಘಾಟಿಸುವರು. ಸಂವೇದ ಅಧ್ಯಕ್ಷ ಪತ್ರೆ ಎಸ್.ದೇವದತ್ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ತಿಪ್ಪೇಶಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಡಾ.ಕೆ.ಪ್ರಕಾಶ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಉಳಿದಂತೆ ಸರ್ ಎಂ.ವಿ. ಪಿಯು ಕಾಲೇಜು ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ಮನೋರೋಗ ತಜ್ಞೆ ಡಾ.ಎಂ.ಅನುಪಮಾ, ಸಿಆರ್‌ಸಿ ನಿರ್ದೇಶಕ ತಮರಾಯ್ ಸೆಲ್ವನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಎಂ.ಎಸ್.ಸುಶ್ರುತ್ ಹಾಗೂ ತರಬೇತುದಾರ ದಾದಾಪೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. ಸುಶ್ರುತ್, ತರಬೇತುದಾರರಾದ ಗೀತಾ ಎನ್. ಸುರ್ವೆ, ಕೋಚ್ ದಾದಾಪೀರ್ ಇದ್ದರು.