ವೋಟ್ ಮಾಡಲೆಂದೇ ಅಮೆರಿಕದಿಂದ ಬಂದ ಟೆಕ್ಕಿಗೆ ನಿರಾಸೆ

dvg-Raghavendra-kamalakara-shet-10.jpg
Published on

ದಾವಣಗೆರೆ: ಮತದಾನ ಮಾಡಲೆಂದೇ ಸಾವಿರಾರು ಕಿ.ಮೀ. ದೂರದ ಅಮೆರಿಕದಿಂದ ದಾವಣಗೆರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ತೀವ್ರ ನಿರಾಸೆಗೆ ಒಳಗಾದರು.
 ದಾವಣಗೆರೆಯವರಾದ ರಾಘವೇಂದ್ರ ಕಮಲಾಕರ ಶೇಟ್, ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಚುನಾವಣೆ ನಡೆದಾಗಲೆಲ್ಲ ಪ್ರತಿ ಬಾರಿ ಅಲ್ಲಿಂದ ಬಂದು ತಮ್ಮ ಹಕ್ಕು ಚಲಾಯಿಸುವ ರೂಢಿ ಇಟ್ಟುಕೊಂಡಿದ್ದಾರೆ.
 ಈ ಬಾರಿ ವಿಧಾನಸಭಾ ಚುನಾವಣೆಗೆ ಬರಲು ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಆನ್‌ಲೈನ್‌ನಲ್ಲಿ ನೋಡಿ ಖಚಿತಪಡಿಸಿಕೊಂಡಿದ್ದರಂತೆ.
 ಆದರೆ ಪ್ರತಿ ಬಾರಿ ತಾವು ವೋಟ್ ಮಾಡುವ, ದಾವಣಗೆರೆ ಉತ್ತರ ಕ್ಷೇತ್ರದ ಬಕ್ಕೇಶ್ವರ ಪ್ರೌಢಶಾಲೆಯ ಮತಗಟ್ಟೆಗೆ ಬೆಳಗ್ಗೆ ಹೋದಾಗ ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ! ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ.
 ‘ಮತ ಚಲಾಯಿಸಲೆಂದೇ 1.25 ಲಕ್ಷ ರೂ. ಖರ್ಚು ಮಾಡಿ, 1 ವಾರ ರಜೆ ಹಾಕಿ, ಸಾವಿರಾರು ಕಿ.ಮೀ. ದೂರದಿಂದ ಬಂದ ನನಗೆ ಬಹಳ ನಿರಾಸೆಯಾಗಿದೆ. ಬೆಳಗ್ಗೆಯಿಂದ ಓಡಾಡಿ ಪ್ರಯತ್ನಪಟ್ಟರೂ ಉಪಯೋಗವಾಗಲಿಲ್ಲ’ ಎಂದು ರಾಘವೇಂದ್ರ ಕಮಲಾಕರ ಶೇಟ್ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net