

ರಮೇಶ ಜಹಗೀರದಾರ್ ದಾವಣಗೆರೆ
ಜಾಗತಿಕ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯಡಿ ಸಮಗ್ರ ತ್ಯಾಜ್ಯ ನಿರ್ವಹಣೆಗೆ ಒತ್ತು ಕೊಡಲು ಯುರೋಪಿಯನ್ ಒಕ್ಕೂಟವು ಭಾರತಕ್ಕೆ ಆರ್ಥಿಕ ನೆರವು ನೀಡುತ್ತಿದೆ. ‘ಸಿಟೀಸ್ 2.0’ ಹೆಸರಿನ ಯೋಜನೆಯಡಿ ಹರಿದು ಬರಲಿರುವ ಅನುದಾನವನ್ನು ಪಡೆಯಲು ದೇಶದ 100 ಸ್ಮಾರ್ಟ್ ಸಿಟಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಫ್ರೆಂಚ್ ಡೆವಲಪ್‌ಮೆಂಟ್ ಏಜೆನ್ಸಿ, ಯುರೋಪಿಯನ್ ಒಕ್ಕೂಟ, ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ.
ಆಯ್ಕೆಯಾಗುವ ಸ್ಮಾರ್ಟ್‌ಸಿಟಿಗಳಿಗೆ 18 ಕೋಟಿ ರೂ.ಗಳಿಂದ 135 ಕೋಟಿ ರೂ. ವರೆಗೆ ಅನುದಾನ ಸಿಗಲಿದೆ. ಒಟ್ಟು ಯೋಜನಾ ವೆಚ್ಚದ ಶೇ. 20ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ.
ಸಮಗ್ರ ತ್ಯಾಜ್ಯ ನಿರ್ವಹಣೆ ಸಂಬಂಧ ಸಲ್ಲಿಕೆಯಾಗುವ ಪ್ರಸ್ತಾವನೆಗಳ ಆಧಾರದ ಮೇಲೆ ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ 18 ನಗರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದು 4 ವರ್ಷಗಳ ಅವಧಿಯನ್ನು ಹೊಂದಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮೇ 31 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಸಿಟೀಸ್ 2.0’ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈ ಸಂಬಂಧ ಡಿ. 11 ಮತ್ತು 12 ರಂದು ಕೇರಳದ ಕೊಚ್ಚಿಯಲ್ಲಿ ಕಾರ್ಯಾಗಾರ ನಡೆಯಲಿದ್ದು ಅದರಲ್ಲಿ ಸ್ಮಾರ್ಟ್‌ಸಿಟಿಗಳ ಇಂಜಿನಿಯರುಗಳು ಭಾಗಿಯಾಗಲಿದ್ದಾರೆ.
...
(ಬಾಕ್ಸ್)
ಆಗುವ ಲಾಭವೇನು?
ತ್ಯಾಜ್ಯ ನಿರ್ವಹಣೆ ಬಹುತೇಕ ನಗರಗಳು ಎದುರಿಸುತ್ತಿರುವ ಸವಾಲಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ‘ಸಿಟೀಸ್ 2.0’ ದಿಂದ ಸಹಾಯವಾಗಲಿದೆ.
ಪ್ಲಾಸ್ಟಿಕ್ ಮರುಬಳಕೆ, ಸ್ವಚ್ಛತೆ ಕಾಪಾಡುವುದು, ಸೆನ್ಸರ್ ಆಧಾರಿತ ಕಸದ ತೊಟ್ಟಿಗಳನ್ನು ಉಪಯೋಗಿಸುವುದು, ಕಸಮುಕ್ತ ನಗರವಾಗಿಸುವ ಜತೆಗೆ ಆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿಗಣಿಸಿ ಅದರಿಂದ ಬೇರೆ ಉತ್ಪನ್ನಗಳನ್ನು ತಯಾರಿಸುವ ಮೂಲಕ ಪರಿಸರಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡುವುದು ಉದ್ದೇಶವಾಗಿದೆ.
‘ಸಿಟೀಸ್ 1.0’ ಕಾರ್ಯಕ್ರಮದಡಿ ಹುಬ್ಬಳ್ಳಿ-ಧಾರವಾಡ ಸೇರಿ ದೇಶದ 12 ಸ್ಮಾರ್ಟ್‌ಸಿಟಿಗಳನ್ನು ಆಯ್ಕೆ ಮಾಡಲಾಗಿತ್ತು. ಈಗ ‘ಸಿಟೀಸ್ 2.0’ ಗೆ ಆಯ್ಕೆಯಾಗಲು ಸ್ಮಾರ್ಟ್‌ಸಿಟಿಗಳ ನಡುವೆ ಸ್ಪರ್ಧೆ ಉಂಟಾಗಿದೆ. ಜ. 11ರೊಳಗೆ ಪ್ರಸ್ತಾವನೆ ಕಳಿಸಬೇಕಿದ್ದು ಅತ್ಯುತ್ತಮ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಕಸರತ್ತು ಆರಂಭವಾಗಿದೆ.
...
(ಕೋಟ್)
‘ಸಿಟೀಸ್ 2.0’ ಯೋಜನೆಯಡಿ ಆಯ್ಕೆಯಾದರೆ ದೊಡ್ಡ ಮೊತ್ತದ ಅನುದಾನ ಸಿಗಲಿದ್ದು ಸಮಗ್ರ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಲು ಅನುಕೂಲವಾಗುತ್ತದೆ. ದಾವಣಗೆರೆ ಸ್ಮಾರ್ಟ್‌ಸಿಟಿಯಿಂದಲೂ ಪ್ರಸ್ತಾವನೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
ವೀರೇಶ ಕುಮಾರ್, ದಾವಣಗೆರೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ