

ರಮೇಶ ಜಹಗೀರದಾರ್ ದಾವಣಗೆರೆ : ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಜಗತ್ತಿನ ಸ್ಮಾರ್ಟ್ ಸಿಟಿಗಳ ಸಮಾವೇಶ (ಸ್ಮಾರ್ಟ್ ಸಿಟಿ ಎಕ್ಸ್‌ಪೋ ವರ್ಲ್ಡ್ ಕಾಂಗ್ರೆಸ್-13ನೇ ಎಡಿಶನ್) ದಲ್ಲಿ ರಾಜ್ಯದ ದಾವಣಗೆರೆ ಮತ್ತು ಬೆಳಗಾವಿ ಸೇರಿದಂತೆ ಭಾರತದ 19 ನಗರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಅಲ್ಲಿನ ವೇದಿಕೆಯಲ್ಲಿ ವಿಷಯ ಮಂಡಿಸಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮಹತ್ವದ ಅವಕಾಶ ಪಡೆದಿದ್ದಾರೆ. ಮಂಗಳವಾರ ಆರಂಭವಾಗಿರುವ ಈ ಸಮಾವೇಶ ನ. 7ರ ವರೆಗೆ ನಡೆಯಲಿದ್ದು ವಿಶ್ವದ ಹಲವಾರು ರಾಷ್ಟ್ರಗಳ ಸ್ಮಾರ್ಟ್ ಸಿಟಿ ಅಧಿಕಾರಿಗಳು ಭಾಗವಹಿಸಿದ್ದಾರೆ. ಭಾರತದ ಪರವಾಗಿ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯು ‘ಇಂಡಿಯಾ ಪೆವಿಲಿಯನ್’ ಎಂಬ ಮಳಿಗೆಯನ್ನು ಸ್ಥಾಪಿಸಿದ್ದು ನಮ್ಮ ದೇಶದ ಸ್ಮಾರ್ಟ್ ಸಿಟಿಗಳ ಸಾಧನೆಯನ್ನು ಅಲ್ಲಿ ಪರಿಚಯಿಸಲಾಗಿದೆ. ಭಾರತದ ನಿಯೋಗದ ನೇತೃತ್ವವನ್ನು ಸ್ಮಾರ್ಟ್ ಸಿಟೀಸ್ ಮಿಷನ್‌ನ ನಿರ್ದೇಶಕ (ಮಿಷನ್ ಡೈರೆಕ್ಟರ್) ರಾಹುಲ್ ಕಪೂರ್ ವಹಿಸಿದ್ದು, ಈ ನಿಯೋಗದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು, ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಸ್ಮಾರ್ಟ್ ಸಿಟಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಗರ ಮಟ್ಟದ ಇತರ ಅಧಿಕಾರಿಗಳು ಇದ್ದಾರೆ. ... (ಬಾಕ್ಸ್) ಅಪೂರ್ವ ಅವಕಾಶ ಈ ಸಮಾವೇಶದಲ್ಲಿ ಭಾರತದ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಇರುವ ಅವಕಾಶಗಳು ಮತ್ತು ಈಗಾಗಲೇ ಕೈಗೊಂಡಿರುವ ವಿನೂತನ ಯೋಜನೆಗಳ ಮೇಲೆ ಬೆಳಕು ಚೆಲ್ಲಲಾಗುವುದು. ಈ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್ ಸಿಟಿಗಳ ಆಗುತ್ತಿರುವ ಬೆಳವಣಿಗೆಗಳು ಹಾಗೂ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ನಗರ ಪ್ರದೇಶಗಳ ಸವಾಲುಗಳನ್ನು ಎದುರಿಸಲು ವಿದೇಶದ ಖಾಸಗಿ ಕಂಪನಿಗಳು ಅಭಿವೃದ್ಧಿಪಡಿಸಿರುವ ಪರಿಹಾರೋಪಾಯಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಇದೊಂದು ಅಪೂರ್ವ ಅವಕಾಶವಾಗಿದೆ. ಭಾರತದ ನಿಯೋಗವು ಅಲ್ಲಿನ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡುವ ಜತೆಗೆ ಬಾರ್ಸಿಲೋನಾದಲ್ಲಿ ಪ್ರವಾಸ ಮಾಡಲಿದೆ. ಇದರಿಂದ ಭಾರತದ ಸ್ಮಾರ್ಟ್ ಸಿಟಿಗಳ ಜಾಲ ವಿಸ್ತಾರಗೊಳ್ಳಲಿದ್ದು ಜಾಗತಿಕ ಮಟ್ಟದ ಸಂಘ ಸಂಸ್ಥೆಗಳ ಜತೆಗೆ ಸಹಭಾಗಿತ್ವ ಹೊಂದಲು ಅವಕಾಶಗಳು ಒದಗಿ ಬರಲಿವೆ. ... (ಬಾಕ್ಸ್) ನಗರಾಭಿವೃದ್ಧಿಗೆ ಫೋಕಸ್ ದಾವಣಗೆರೆ ಸ್ಮಾರ್ಟ್ ಸಿಟಿಯಿಂದ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೀರೇಶ ಕುಮಾರ್ ಪ್ರತಿನಿಧಿಸಿದ್ದಾರೆ. ಅಲ್ಲಿ ಅವರು ‘ಭಾರತದಲ್ಲಿ ನಗರಾಭಿವೃದ್ಧಿ’, ‘ನಗರಾಭಿವೃದ್ಧಿಯಲ್ಲಿ ಹಣಕಾಸು ಸವಾಲುಗಳು ಮತ್ತು ಅವಕಾಶಗಳು’ ಇನ್ನಿತರ ವಿಷಯಗಳ ಕುರಿತು ಚರ್ಚಾ ಗೋಷ್ಠಿಯಲ್ಲಿ ವಿಚಾರ ಹಂಚಿಕೊಳ್ಳಲಿದ್ದಾರೆ. ನಗರಾಭಿವೃದ್ಧಿಯಲ್ಲಿ ಇರುವ ಪ್ರಮುಖ ಸವಾಲುಗಳು, ಯಾವ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ, ಹಣಕಾಸು ನಿರ್ವಹಣೆಯಲ್ಲಿ ನಗರಗಳಿಗೆ ಇರುವ ಇತಿಮಿತಿಗಳು, ನಗರಾಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ, ಯಾವ ಕ್ಷೇತ್ರಗಳಲ್ಲಿ ಸಹಭಾಗಿತ್ವದ ನಿರೀಕ್ಷೆಯಿದೆ ಎನ್ನುವ ಕುರಿತು ಚಿಂತನ ಮಂಥನ ನಡೆಯಲಿದೆ. ... (ಕೋಟ್) ದಾವಣಗೆರೆ ನಗರದಲ್ಲಿ 129 ಕೋಟಿ ರೂ. ವೆಚ್ಚದಲ್ಲಿ 46 ಕಿ.ಮೀ.ಗಳಷ್ಟು ಮಳೆನೀರು ಚರಂಡಿ ನಿರ್ಮಾಣ, ತುಂಗಭದ್ರಾ ನದಿಯಲ್ಲಿ ಬ್ಯಾರೇಜ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿ ಕೈಗೊಂಡಿರುವ ಅಭಿವೃದ್ಧಿಯ ಮಾದರಿಗಳ ಕುರಿತು ಎಕ್ಸ್‌ಪೋದಲ್ಲಿ ಪರಿಚಯಿಸಲಾಗುವುದು. ಸ್ಮಾರ್ಟ್ ಸಿಟಿಯ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಇದೊಂದು ಒಳ್ಳೆಯ ಅವಕಾಶವಾಗಿದೆ. ವೀರೇಶ ಕುಮಾರ್, ದಾವಣಗೆರೆ ಸ್ಮಾರ್ಟ್ ಸಿಟಿ ಎಂ.ಡಿ ಮತ್ತು ಸಿಇಒ ...