

ದಾವಣಗೆರೆ : ನಮ್ಮ ಜೀವಿತಾವಧಿಯಲ್ಲಿ ಅಪರೂಪವಾದ, ಗ್ರಹಗಳ ಮೆರವಣಿಗೆಯ ಕೌತುಕದ ದೃಶ್ಯ ನಭೋ ಮಂಡಲದಲ್ಲಿ ಶನಿವಾರ ರಾತ್ರಿ ಗೋಚರವಾಗಲಿದೆ. ಶುಕ್ರ, ನೆಪ್ಚೂನ್, ಶನಿ, ಬುಧ, ಯುರೇನಸ್, ಗುರು, ಮಂಗಳ ಈ ಏಳೂ ಗ್ರಹಗಳೂ ಒಂದೇ ಸಾಲಿನಲ್ಲಿ ಕಾಣಸಿಗಲಿವೆ. ಅವುಗಳಲ್ಲಿ ನಾಲ್ಕನ್ನು ಬರಿಗಣ್ಣಿನಿಂದ ನೋಡಬಹುದು, 2 ಗ್ರಹಗಳನ್ನು ಟೆಲಿಸ್ಕೋಪ್ ಮೂಲಕ ಮಾತ್ರ ವೀಕ್ಷಿಸಬಹುದು ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಸೂರ್ಯ, ಚಂದ್ರ ಹಾಗೂ ಗ್ರಹಗಳು ರಾಶಿಪಟ್ಟಿಯ ಊಹಾತ್ಮಕ ರೇಖೆಯ ಚಲನೆಯಲ್ಲಿ ಇರುತ್ತವೆ. ಕೆಲವೊಮ್ಮೆ ಕೆಲವು ಗ್ರಹಗಳು ಜತೆ ಜತೆಗೆ ನಾ ಮುಂದು ತಾ ಮುಂದು ಎಂದು ಓಟದಲ್ಲಿ ಸಾಗುವುದನ್ನು ಗಮನಿಸಿರಬಹುದು. ಆದರೆ ಏಳು ಗ್ರಹಗಳ ಓಟದ ಮೆರವಣಿಗೆ ಅಪರೂಪ. ಶನಿವಾರ ಅಂಥ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು, ಖಗೋಳ ತಜ್ಞ ಎಂ.ಟಿ. ಶರಣಪ್ಪ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ತಿಳಿಸಿದ್ದಾರೆ. ... (ಬಾಕ್ಸ್) ಟೆಲಿಸ್ಕೋಪ್‌ನಲ್ಲಿ ವೀಕ್ಷಣೆ ವ್ಯವಸ್ಥೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ವತಿಯಿಂದ ನಗರದ ಹೊರ ವಲಯದಲ್ಲಿರುವ ಶಿರಮಗೊಂಡನಹಳ್ಳಿಯ ಅನ್‌ಮೋಲ್ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಶನಿವಾರ ಸಂಜೆ 7 ರಿಂದ ಖಗೋಳ ತಜ್ಞ ಎಂ.ಟಿ. ಶರಣಪ್ಪ ಅವರು ಟೆಲಿಸ್ಕೋಪ್ ಮೂಲಕ ನೇರ ವೀಕ್ಷಕ ವಿವರಣೆಯೊಂದಿಗೆ ಗ್ರಹಗಳ ಮೆರವಣಿಗೆಯ ವಿವರ ನೀಡಲಿದ್ದಾರೆ. ಆಸಕ್ತರು ಭಾಗವಹಿಸಿ, ಕಣ್ತುಂಬಿಕೊಳ್ಳಬಹುದಾಗಿದೆ. ಮಾಹಿತಿಗಾಗಿ ಎಂ.ಟಿ. ಶರಣಪ್ಪ, 9480343266, ಎಂ. ಗುರುಸಿದ್ಧಸ್ವಾಮಿ, 9880531823 ಅವರನ್ನು ಸಂಪರ್ಕಿಸಬಹುದು. ... ಗಮನಿಸಬೇಕಾದ ಸಂಗತಿಗಳು * ಸೂರ್ಯಾಸ್ತವಾದೊಡನೆ ರಾತ್ರಿ ಆಕಾಶದಲ್ಲಿ ನಾಲ್ಕು ಗ್ರಹಗಳಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ನೈರುತ್ಯ ದಿಕ್ಕಿನಲ್ಲಿ ಮತ್ತು ಗುರು ಗ್ರಹವು ನೆತ್ತಿಯ ಆಗ್ನೇಯ ದಿಕ್ಕಿನಲ್ಲಿ ಹಾಗೂ ಪೂರ್ವ ದಿಕ್ಕಿನಲ್ಲಿ ಮಂಗಳ ಗ್ರಹವನ್ನು ನೋಡಬಹುದು. * ಸೂರ್ಯಾಸ್ತವಾದ ನಂತರ 45 ನಿಮಿಷದ ವರೆಗೆ ಶುಕ್ರ ಮತ್ತು ಶನಿ ಗ್ರಹಗಳನ್ನು ನೋಡಲು ಉತ್ತಮವಾದ ವೇಳೆ ಆಗಿರುತ್ತದೆ. 9.30 ರ ನಂತರ ಆ ಗ್ರಹಗಳು ಅಸ್ತಂಗತವಾಗುತ್ತವೆ. * ಜ. 18ಕ್ಕೆ ಶುಕ್ರ ಮತ್ತು ಶನಿ ಗ್ರಹಗಳು ಬಹಳ ಸಮೀಪದಲ್ಲಿ ಸಂಯೋಜನೆಗೊಂಡಿವೆ. ಶನಿ ಗ್ರಹಕ್ಕಿಂತ ಶುಕ್ರ ಗ್ರಹವು 110 ಪಟ್ಟು ಪ್ರಜ್ವಲಿಸುತ್ತದೆ. ಇದು ರಾತ್ರಿ ಆಕಾಶದಲ್ಲಿ ಚಂದ್ರನನ್ನು ಹೊರತುಪಡಿಸಿದರೆ ಪ್ರಕಾಶಮಾನವಾಗಿ ಕಾಣುವ ಆಕಾಶ ಕಾಯ. * ಇನ್ನೆರಡು ಗ್ರಹಗಳಾದ ನೆಪ್ಚೂನ್ ಮತ್ತು ಯುರೇನಸ್‌ಗಳನ್ನು ದೂರದರ್ಶಕ ಸಹಾಯವಿಲ್ಲದೆ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ನೆಪ್ಚೂನ್ ಗ್ರಹವು ಶುಕ್ರ ಮತ್ತು ಶನಿ ಗ್ರಹಗಳ ಸ್ವಲ್ಪ ಮೇಲೆ ಹಾಗೂ ಯುರೇನಸ್, ಗುರು ಗ್ರಹದ ಸ್ವಲ್ಪ ಮೇಲ್ಭಾಗದಲ್ಲಿ ದೂರದರ್ಶಕದ ಸಹಾಯದಿಂದ ವೀಕ್ಷಿಸಬಹುದು. * ರಾತ್ರಿ ಆಕಾಶದಲ್ಲಿ ತಪ್ಪಿಸಿಕೊಳ್ಳುವ ಏಕೈಕ ಗ್ರಹ ಬುಧ. ಇದು ಸೂರ್ಯನಿಗೆ ಅತಿ ಸಮೀಪದಲ್ಲಿದ್ದು ಸೂರ್ಯೋದಯಕ್ಕೆ 45 ನಿಮಿಷ ಮುಂಚಿತವಾಗಿ ಸೂರ್ಯನ ಪ್ರಭೆಯಲ್ಲಿ ಪ್ರಯಾಸ ಪಟ್ಟು ವೀಕ್ಷಣೆ ಮಾಡಿ. ಸಂಜೆಯ ಆಕಾಶದಲ್ಲಿ ನೋಡಬಯಸುವರು ಫೆ. 22 ರಂದು ಸೂರ್ಯಾಸ್ತವಾದ 40 ನಿಮಿಷದ ಅಂತರದಲ್ಲಿ ಶನಿ ಗ್ರಹದ ಸ್ವಲ್ಪ ಕೆಳಭಾಗದಲ್ಲಿ ಹಾಗೂ 24 ರಂದು ಶನಿ ಗ್ರಹದ ಮೇಲ್ಭಾಗದಲ್ಲಿ ವೀಕ್ಷಿಸಬಹುದು.