

ರಮೇಶ ಜಹಗೀರದಾರ್ ದಾವಣಗೆರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ತರಬೇತಿ ಪಡೆದ 6757 ಫಲಾನುಭವಿಗಳು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ಸುಕರಾಗಿದ್ದು ಬ್ಯಾಂಕ್ ಸಾಲ ಮತ್ತು ಸರ್ಕಾರದಿಂದ ಟೂಲ್‌ಕಿಟ್ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲತೆ ಇರುವವರು ತಮ್ಮ ವೃತ್ತಿಯಲ್ಲಿ ಎತ್ತರಕ್ಕೆ ಏರಲು ಆಸರೆಯಾಗುವ ಆಶಯದ ‘ಪ್ರಧಾನಮಂತ್ರಿ ವಿಶ್ವಕರ್ಮ’ ಕೇಂದ್ರ ವಲಯದ ಯೋಜನೆಯಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ ಹಾಗೂ ಹಣಕಾಸು ಸಚಿವಾಲಯ ಜಂಟಿಯಾಗಿ ಇದನ್ನು ಜಾರಿಗೊಳಿಸಿವೆ. ದೇಶದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಯೋಜನೆ ಉದ್ಘಾಟನೆಯಾಯಿತು. ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಚಾಲನೆ ದೊರೆಯಿತು. ಜಿಲ್ಲೆಯಲ್ಲಿ ಒಟ್ಟು 1.02 ಲಕ್ಷ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 20 ಸಾವಿರ ಅರ್ಜಿಗಳನ್ನು ಅನುಮೋದನೆಗಾಗಿ ರಾಜ್ಯಮಟ್ಟಕ್ಕೆ ಕಳಿಸಲಾಗಿತ್ತು. ಆ ಪೈಕಿ 6757 ಮಂದಿಗೆ ಮಾತ್ರ ತರಬೇತಿ ದೊರೆತಿದೆ. ಫಲಾನುಭವಿಗಳಲ್ಲಿ ಟೈಲರಿಂಗ್ ಮಾಡುವವರ ಸಂಖ್ಯೆಯೇ ಜಾಸ್ತಿಯಿದೆ. 6384 ಮಂದಿ ಇದೇ ವೃತ್ತಿಯನ್ನು ಅವಲಂಬಿಸಿದ್ದಾರೆ. 274 ಜನ ಕಾರ್ಪೆಂಟರ್‌ಗಳು, 36 ಮಂದಿ ಕ್ಷೌರಿಕರು, ಹೂಮಾಲೆ ಕಟ್ಟುವ 63 ಜನರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ತರಬೇತಿ ಪಡೆದಿದ್ದಾರೆ. ಲೋಕಸಭಾ ಚುನಾವಣೆಗಿಂತ ಮೊದಲು ತರಬೇತಿ ನೀಡಲಾಗಿತ್ತು. ಅದಾಗಿ ಮೂರ್ನಾಲ್ಕು ತಿಂಗಳು ಕಳೆದಿವೆ. ಅವರಿಗೆ ಪ್ರಮಾಣಪತ್ರ ನೀಡಲಾಗಿದೆ. ಇತ್ತೀಚೆಗಷ್ಟೆ ಸ್ಟೈಪಂಡ್ ಮೊತ್ತ ಬಂದಿದೆ. ಆದರೆ ಮುಖ್ಯವಾಗಿ ಅವರಿಗೆ 15 ಸಾವಿರ ರೂ. ಮೌಲ್ಯದ ಟೂಲ್ ಕಿಟ್ ಸಿಗಬೇಕಿದ್ದು ಇದುವರೆಗೂ ಬಂದಿಲ್ಲ. ಅದಕ್ಕೆ ಸಂಬಂಧಿಸಿದಂತೆ ವೋಚರ್ ಮಾತ್ರ ತಲುಪಿದೆ. ಯಾವಾಗ ಕಿಟ್ ಬರುತ್ತದೆ ಎನ್ನುವ ಸ್ಪಷ್ಟತೆ ಇಲ್ಲ. ತರಬೇತಿ ಪಡೆದವರು ಸಂಬಂಧಿಸಿದ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಬ್ಯಾಂಕ್‌ಗಳಿಂದ 1 ಲಕ್ಷ ರೂ. ಸಾಲ ನೀಡುವುದು ಯೋಜನೆಯಲ್ಲಿದೆ. ಇದುವರೆಗೂ ಆ ಸೌಲಭ್ಯ ಫಲಾನುಭವಿಗಳಿಗೆ ದೊರಕಿಲ್ಲ. ಇದುವರೆಗೆ ಎಷ್ಟು ಫಲಾನುಭವಿಗಳಿಗೆ ಸಾಲ ನೀಡಿದ್ದೀರಿಎನ್ನುವ ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜೇಂದ್ರ ಕದಮ್ ತಿಳಿಸಿದರು. ...
(ಕೋಟ್)
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಒಳ್ಳೆಯ ತರಬೇತಿ ಸಿಕ್ಕಿದೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ನಮ್ಮ ವೃತ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಟೂಲ್‌ಕಿಟ್ ಇನ್ನೂ ಬಂದಿಲ್ಲ. ಸಾಲವೂ ಇದುವರೆಗೆ ದೊರಕಿಲ್ಲ. ಸೌಲಭ್ಯ ಸಿಕ್ಕರೆ ಅನುಕೂಲವಾಗುತ್ತದೆ. ಕೆ.ಬಿ. ಮಂಜುನಾಥಚಾರಿ ಫಲಾನುಭವಿ, ಜಿಗಳಿ ಗ್ರಾಮ ಹರಿಹರ ತಾಲೂಕು
ಯಾವ ವೃತ್ತಿಗಳಿಗೆ ಅನ್ವಯ?
ಮರಗೆಲಸದವರು, ದೋಣಿ ತಯಾರಕರು, ಕಮ್ಮಾರರು, ಸುತ್ತಿಗೆ ಮತ್ತು ಟೂಲ್‌ಕಿಟ್ ಮಾಡುವವರು, ಬೀಗ ತಯಾರಿಸುವವರು, ಶಿಲ್ಪಿಗಳು, ಅಕ್ಕಸಾಲಿಗರು, ಕುಂಬಾರರು, ಪಾದರಕ್ಷೆ ಕುಶಲಕರ್ಮಿಗಳು, ಮೇಸ್ತ್ರಿ, ಬುಟ್ಟಿ/ಚಾಪೆ/ಪೊರಕೆ/ಸೆಣಬು ನೇಯುವವರು, ಗೊಂಬೆ ಮತ್ತು ಆಟಿಕೆ ತಯಾರಕರು (ಸಾಂಪ್ರದಾಯಿಕ), ಕ್ಷೌರಿಕರು, ಹೂಮಾಲೆ ತಯಾರಕರು, ಮಡಿವಾಳರು, ದರ್ಜಿಗಳು, ಮೀನಿನ ಬಲೆ ತಯಾರಕರು.