ಹರಿಹರದ ಒಳಚರಂಡಿ ಛೇಂಬರ್‌ನಲ್ಲಿ ಮನುಷ್ಯನ ಅಸ್ತಿಪಂಜರ ಪತ್ತೆ

SKELTON
Published on

ದಾವಣಗೆರೆ: ಜಿಲ್ಲೆ ಹರಿಹರ ನಗರದ ಲೇಔಟ್​ವೊಂದರಲ್ಲಿ ಒಳಚರಂಡಿ ಛೇಂಬರ್‌ನಲ್ಲಿ ಮನುಷ್ಯನ ಅಸ್ತಿಪಂಜರ ಪತ್ರೆಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.

ಹರಿಹರದ ಹೊರವಲಯದ ಶಿವಮೊಗ್ಗ ರಸ್ತೆ ಬದಿಯ ಹರಿಹರೇಶ್ವರ ಲೇಔಟ್ ಹಿಂಭಾಗದ ನೂತನ ಲೇಔಟ್‌ನಲ್ಲಿ ಕಾರ್ಮಿಕರು ಯುಜಿಡಿ ಸಂಪರ್ಕ ಕಲ್ಪಿಸಲು ಛೇಂಬರ್‌ ಮುಚ್ಚಳ ತೆರೆದಾಗ ಅಸ್ತಿಪಂಜರ ಕಂಡುಬಂದಿದೆ. ಭಯಗೊಂಡ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಅಸ್ತಿಪಂಜರದ ಪರಿಶೀಲನೆ ನಡೆಸಿದರು.

ಸ್ಥಳದಲ್ಲೇ ಪ್ರಾಥಮಿಕ ಪರೀಕ್ಷೆ ನಡೆಸಿದ ದಾವಣಗೆರೆ ಜಿಲ್ಲಾಸ್ಪತ್ರೆ ವೈದ್ಯ ಡಾ. ಮೋಹನ್‌ಕುಮಾರ್ ಅವರು, 25-30 ಪ್ರಾಯದ, 5.4 ಅಡಿ ಎತ್ತರದ ಪುರುಷನ ಅಸ್ತಿಪಂಜರವೆಂದು ಮಾಹಿತಿ ನೀಡಿದ್ದಾರೆ.

ಅಸ್ತಿಪಂಜರದೊಂದಿಗೆ ಇದ್ದ ಉಡುದಾರ, ಕೈಗೆ ಧರಿಸಿದ್ದ ಲೋಹದ ಬಳೆ, ಕೊರಳು ದಾರದಿಂದ ಪುರುಷನ ಅಸ್ತಿಪಂಜರವಿರಬಹುದು ಎಂಬ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಪರೀಕ್ಷೆಗೆ ಅಸ್ತಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಹರಿಹರದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ತನಿಖೆ ಅರಂಭವಾಗಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net