

ದಾವಣಗೆರೆ : ತಾಲೂಕಿನ ಆಲೂರುಹಟ್ಟಿ-ಮೆಳ್ಳೆಕಟ್ಟೆ ಮಧ್ಯೆ ರಸ್ತೆ ಪಕ್ಕದ ಸ್ಮಶಾನ ಜಾಗದಲ್ಲಿ ಮಂಗಳವಾರ ಬೈಕ್ ಜತೆಯಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ಮೃತದೇಹ ಕೊಳೆತು, ಕೇವಲ ತಲೆಬುರುಡೆ, ಕೈ, ಕಾಲು ಮೂಳೆಗಳು ಸ್ಥಳದಲ್ಲಿ ಬಿದ್ದಿವೆ. ಆ ವ್ಯಕ್ತಿ ಯಾರು, ಏನಾಗಿತ್ತು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳವನ್ನು ಗಮನಿಸಿದರೆ ಅಪಘಾತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಸ್ಥಿಪಂಜರ ಸಿಕ್ಕಿರುವ ಜಾಗದಲ್ಲಿ ಗಿಡಗಂಟಿಗಳು 5-6 ಅಡಿಗಳಷ್ಟು ಎತ್ತರಕ್ಕೆ ಬೆಳೆದಿರುವುದರಿಂದ ಇಷ್ಟು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಕುರಿಗಾಹಿಯೊಬ್ಬ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದರು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೂ ಭೇಟಿ ನೀಡಿ, ಸ್ಥಳದಲ್ಲಿ ದೊರೆತ ತಲೆಬುರುಡೆ, ಮೂಳೆಗಳನ್ನು ಪರಿಶೀಲಿಸಿದರು. ಪ್ರಯೋಗಾಲಯದಲ್ಲಿ ಡಿಎನ್‌ಎ ಇನ್ನಿತರ ಪರೀಕ್ಷೆ ನಡೆಸಿದ ನಂತರ ವ್ಯಕ್ತಿಯ ಗುರುತು ಪತ್ತೆಯಾಗುವ ಸಾಧ್ಯತೆಯಿದೆ.