

ದಾವಣಗೆರೆ : ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನಗಳು ದೊರೆಯುವಂತೆ ಮಾಡುವುದು ನನ್ನ ಆದ್ಯತೆಯಾಗಿದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು. ದೂಡಾ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಪ್ರಾಧಿಕಾರದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ನಾಲ್ಕೂ ದಿಕ್ಕುಗಳಲ್ಲಿ ಬೆಳವಣಿಗೆಯಾಗುವಂತೆ ಹಾಗೂ ಹರಿಹರದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಚಿಂತನೆಯಿದೆ. ರೈತರು 50 ಎಕರೆ ಜಮೀನು ನೀಡಿದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಆಟೋ, ಟ್ಯಾಕ್ಸಿ ಚಾಲಕರು, ಖಾಸಗಿ ಬಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿ ಅರ್ಹ ಬಡವರಿಗೆ ಸೌಲಭ್ಯ ತಲುಪಿಸುವ ಭರವಸೆ ನೀಡಿದರು. ಈ ಹಿಂದೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಬಡವರಿಗಾಗಿ 20 ಸಾವಿರ ಮನೆ ನಿರ್ಮಿಸಿದ್ದನ್ನು ನೆನಪಿಸಿದರು. ಸಾಮಾನ್ಯ ಕಾರ್ಯಕರ್ತರಾದ ತಮಗೆ ಪಕ್ಷ ಜವಾಬ್ದಾರಿ ನೀಡಿದೆ. ಬೇರೆ ಪಕ್ಷಗಳಲ್ಲಿ ಈ ಪದ್ಧತಿ ಇಲ್ಲ ಎಂದು ಹೇಳಿದರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸೇವೆ ಸಲ್ಲಿಸಿದ ಕಾರ್ಯಕರ್ತನಿಗೆ ದೂಡಾ ಅಧ್ಯಕ್ಷ ಸ್ಥಾನ ಲಭಿಸಿದೆ. ದಿನೇಶ್ ಶೆಟ್ಟಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹಾರೈಸಿದರು. ಕಾಂಗ್ರೆಸ್ ಬಿಟ್ಟವರನ್ನು ಕರೆದುಕೊಂಡು ಬಂದು ಬಿಜೆಪಿಯವರು ದೂಡಾ ಅಧ್ಯಕ್ಷರನ್ನಾಗಿ ಮಾಡಿದ ಉದಾಹರಣೆಯಿದೆ. ಅಂಥ ಕೆಲಸಕ್ಕೆ ನಮ್ಮ ಪಕ್ಷ ಕೈಹಾಕುವುದಿಲ್ಲ. ತಳ ಮಟ್ಟದಿಂದ ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು. ಈ ಹಿಂದೆ ದೂಡಾ ಅಧ್ಯಕ್ಷರಾಗಿದ್ದ ಕೆಲವರು ದೊಡ್ಡ ದೊಡ್ಡ ನಿವೇಶನಗಳನ್ನು ಹೆಂಡತಿಯ ತಂಗಿ ಹೆಸರಿಗೆ ಮಾಡಿ, ನಂತರ ತಮ್ಮ ಹೆಸರಿಗೆ ಬದಲಾಯಿಸಿಕೊಂಡು ಬೃಹತ್ ಕಟ್ಟಡಗಳನ್ನು ಕಟ್ಟಿದ್ದಾರೆ ಎಂದು ಆರೋಪಿಸಿದರು. ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಐದಾರು ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ ಅರ್ಜುನ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಕ್ರೀಡಾಪಟು ಏಂಜೆಲ್ ಮೇರಿ ಅವರಿಗೆ ದೂಡಾದಿಂದ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಹರಿಹರದಲ್ಲಿ ಪ್ರಾಧಿಕಾರದಿಂದ ಒಂದೂ ಬಡಾವಣೆ ಅಭಿವೃದ್ಧಿಪಡಿಸಿಲ್ಲ. ನಿಮ್ಮ ಅವಧಿಯಲ್ಲಿ ಉತ್ತಮ ಬಡಾವಣೆ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ಎಂ.ಮಂಜುನಾಥ (ತಕ್ಕಡಿ), ಎಂ.ಆರ್. ವಾಣಿ, ಎಚ್. ಗಿರೀಶ್, ಎಚ್. ಜಬ್ಬಾರ್ ಖಾನ್, ಉದ್ಯಮಿ ಅಣಬೇರು ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಪಾಲಿಕೆ ಸದಸ್ಯ ಎ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಅನಿತಾಬಾಯಿ, ಶಾಮನೂರು ಟಿ. ಬಸವರಾಜ್, ಕೆ.ಜಿ. ಶಿವಕುಮಾರ್, ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ ಇದ್ದರು. ... (ಕೋಟ್) ಭದ್ರಾ ಜಲಾಶಯಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಬಾಗಿನ ಸಲ್ಲಿಸಲಾಗುವುದು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲೆಯ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ದಿನೇಶ್ ಕೆ. ಶೆಟ್ಟಿ, ದೂಡಾ ನೂತನ ಅಧ್ಯಕ್ಷ