

ದಾವಣಗೆರೆ : ಭಾರತ ಮಾತೆಗೆ ಜಯ ತಂದು ಕೊಡುವವರು ಮತ್ತೊಮ್ಮೆ ದೇಶದ ನೇತೃತ್ವ ವಹಿಸುವಂತೆ 2024ರ ಲೋಕಸಭಾ ಚುನಾವಣೆಯಲ್ಲಿ ಜನರು ನಿರ್ಧರಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಶ್ರೀ ರೇಣುಕಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಜನರು ರಾಷ್ಟ್ರ ಮೊದಲು ಎಂಬ ವಿಚಾರಕ್ಕೆ ಬಹಳ ಎಚ್ಚರಿಕೆಯಿಂದ ಮತ ಹಾಕಿದ ಕಾರಣದಿಂದಾಗಿ ದೇಶದಲ್ಲಿ 495 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ರಾಮಮಂದಿರದಂತೆ ಎಷ್ಟೋ ಮಂದಿರಗಳು ಪರಕೀಯರ ಆಕ್ರಮಣಕ್ಕೆ ತುತ್ತಾಗಿವೆ. ಎಲ್ಲವೂ ತಮ್ಮ ಬಿಡುಗಡೆಯ ಭಾಗ್ಯಕ್ಕಾಗಿ ಕಾಯುತ್ತಿವೆ. ಎಲ್ಲಿವರೆಗೂ ರಾಷ್ಟ್ರ ಮರು ನಿರ್ಮಾಣದ ಜಾಗರೂಕತೆಯಿಂದ ಮತ ಹಾಕುವುದನ್ನು ನಿರಂತರಗೊಳಿಸುತ್ತೇವೋ ಆಗ ಮತ್ತೆ ಕಾಶಿ, ಮಥುರಾ ಸೇರಿದಂತೆ ಉಳಿದೆಲ್ಲವುಗಳ ಪುನರುತ್ಥಾನ ಕಾರ್ಯ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.
ಚುನಾವಣೆ ಬಂದಾಗ ಮೈಮರೆತು ಜಾತಿ, ಹಣ ಹಾಗೂ ಆಮಿಷಕ್ಕೆ ಒಳಗಾಗಿ ಮತ ಹಾಕಿದರೆ ಅದರಿಂದ ಆಗುವ ಅನಾಹುತ ಊಹಿಸಲೂ ಸಾಧ್ಯವಿಲ್ಲ ಎಂದರು.
ಹಿಂದುತ್ವ, ಹಿಂದು ಬಹುಸಂಖ್ಯಾತರಾಗಿ ಇರುವವರೆಗೂ ಭಾರತ ಹಾಗೂ ಭಾರತದ ಸಂಸ್ಕೃತಿ ಉಳಿಯುತ್ತದೆ. ಆದರೆ, ಹಿಂದು ಅಲ್ಪಸಂಖ್ಯಾತರಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, 1990 ರಿಂದ ಹಿಂದುಗಳ ಸಂಘಟನೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆದಿದೆ. ಆರ್‌ಎಸ್‌ಎಸ್, ಭಜರಂಗದಳ ಎಂದರೆ ದೇಶಭಕ್ತಿ. ಶಿವಮೊಗ್ಗ ಘಟನೆಯ ಕುರಿತು ಸಚಿವರು ಸಲ್ಲದ ಮಾತನಾಡುವುದು ಸರಿಯಲ್ಲ. ಸರ್ಕಾರ ತೀವ್ರ ಬರಗಾಲ ತೋರಿರುವ ಸಂದರ್ಭದಲ್ಲಿ ಬರ ಪರಿಹಾರ ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರೊದಗಿಸಲು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು ದೇಶದಿಂದ ಸನಾತನ ಧರ್ಮ ಹೊಡೆದೋಡಿಸುತ್ತೇವೆ ಎನ್ನುವ ಕಾಲದಲ್ಲಿ ಹಿಂದು ಸಂಘಟನೆಗಳ ಹೋರಾಟ ಮತ್ತೆ ಪ್ರಾರಂಭವಾಗಿದೆ. ಹಿಂದು ಸಂಸ್ಕೃತಿ ಹಾಗೂ ಪರಂಪರೆ ಬೃಹತ್ತಾಗಿ ಬೆಳೆಸಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ನಗರಕ್ಕೆ 1990ರಲ್ಲಿ ರಾಮಜ್ಯೋತಿ ರಥಯಾತ್ರೆ ಬಂದಂತಹ ಸಂದರ್ಭದಲ್ಲಿ ನಡೆದ ಗೋಲಿಬಾರ್‌ನಲ್ಲಿ 8 ಜನರು ಬಲಿದಾನವಾಗಿದ್ದು ಹುತಾತ್ಮರ ಸ್ಮರಣಾರ್ಥ ಅವರ ಹೆಸರನ್ನು ಬರೆಸಿ 15 ಕೆ.ಜಿ.ಬೆಳ್ಳಿ ಇಟ್ಟಿಗೆಯನ್ನು ಶ್ರೀರಾಮ ಮಂದಿರಕ್ಕೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ್ಯ ವಹಿಸಿದ್ದರು. ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಹಿಂದು ಸಂಘಟನಾ ಪ್ರಮುಖ ಕೆ.ಬಿ. ಶಂಕರನಾರಾಯಣ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಬಸವರಾಜನಾಯ್ಕ, ಬೆಳ್ಳಿ ಪ್ರಕಾಶ್, ಗಾಯತ್ರಿ ಸಿದ್ದೇಶ್ವರ್, ಪಾಲಿಕೆ ಸದಸ್ಯ ಅಜಯ್‌ಕುಮಾರ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಚನ್ನಗಿರಿ ತುಮ್‌ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್,ಉತ್ತಮ್‌ಚಂದ್ ಜೈನ್ ಇದ್ದರು.
ಇದೇ ಸಂದರ್ಭದಲ್ಲಿ ರಾಮಜ್ಯೋತಿ ಸಂದರ್ಭದಲ್ಲಿ ಹುತಾತ್ಮರಾದವರು ಗಾಯಗೊಂಡ ಕುಟುಂಬದವರನ್ನು ಸನ್ಮಾಣಿಸಲಾಯಿತು. ರಾಜನಹಳ್ಳಿ ಶಿವಕುಮಾರ್ ಸ್ವಾಗತಿಸಿದರು.