

ದಾವಣಗೆರೆ : ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ಖಂಡನೀಯ, ಕಳವಳಕಾರಿ ಹಾಗೂ ಅಸಭ್ಯವಾದುದು. ಇಂತಹ ಕೃತ್ಯಗಳು ನ್ಯಾಯಾಂಗದ ಗೌರವ ಮತ್ತು ಘನತೆಗೆ ಧಕ್ಕೆಯುಂಟು ಮಾಡುತ್ತವೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ತಿಳಿಸಿದ್ದಾರೆ. ಈ ನೆಲದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ. ಆದರೆ, ಅಸಭ್ಯತೆ, ಹಿಂಸೆ, ಅವಿನಯದ ನಡೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಹಾನಿ ಉಂಟು ಮಾಡುತ್ತವೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಇಂತಹ ಕೃತ್ಯಗಳನ್ನು ದೇಶದ ಜನತೆ ಮತ್ತು ವಕೀಲರು ಒಗ್ಗೂಡಿ ಖಂಡಿಸಬೇಕು ಎಂದಿದ್ದಾರೆ. ಇಂತಹ ಕೃತ್ಯದಿಂದ ಮುಖ್ಯ ನ್ಯಾಯಮೂರ್ತಿಗಳು ವಿಚಲಿತರಾಗದೇ ಕಾರ್ಯ ಕಲಾಪಗಳನ್ನು ನಡೆಸಿ, ನ್ಯಾಯಾಂಗದ ದೃಢತೆ, ಗೌರವ, ಘನತೆಯನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯವಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದ್ದಾರೆ.