ಕೇಸರಿ ರಂಗಿನಲ್ಲಿ ವೈಭವದ ಶೋಭಾಯಾತ್ರೆ

dvg-shobha-yatre-1.jpg
Published on

ದಾವಣಗೆರೆ : ಕೇಸರಿಮಯವಾಗಿದ್ದ ಮೆರವಣಿಗೆ ಮಾರ್ಗ, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವ ಪಡೆ. ಕಳೆ ತುಂಬಿದ ಕಲಾ ತಂಡಗಳು, ಸ್ತಬ್ಧಚಿತ್ರಗಳನ್ನು ಹೊತ್ತ ವಾಹನಗಳ ಸಾಲು. ‘ಜೈ ಶ್ರೀರಾಮ್’ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು.  ವಿಶ್ವ ಹಿಂದು ಪರಿಷತ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ, ವಿಜಯದಶಮಿ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಶೋಭಾಯಾತ್ರೆಯ ವೈಭವದ ದೃಶ್ಯಗಳಿವು.  ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಜಡೆಸಿದ್ದ ಶಿವಯೋಗೀಶ್ವರ ಮಠದ ಶ್ರೀ ಡಾ. ಶಿವಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿಯ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.  ಹೊತ್ತು ಏರುತ್ತಿದ್ದಂತೆ ಬಿಸಿಲೂ ಚುರುಕಾಯಿತು. ಆಗಾಗ ಹವಾಮಾನ ಬದಲಾಗಿ ತುಂತುರು ಹನಿಗಳೂ ಬಿದ್ದವು. ಆದರೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವರ ಉತ್ಸಾಹ ಕಡಿಮೆಯಾಗಲಿಲ್ಲ. ಜನಸಾಗರವೇ ಹರಿದು ಬಂದಿತು.  ಡಿಜೆಯಲ್ಲಿ ಕೇಳಿಬರುತ್ತಿದ್ದ ಅಬ್ಬರದ ಸಂಗೀತಕ್ಕೆ ಯುವಕರು, ಮಕ್ಕಳು ಹೆಜ್ಜೆ ಹಾಕಿದರು. ರಸ್ತೆಯೇ ಎದ್ದು ಕುಣಿದಂತೆ ಭಾಸವಾಗುತ್ತಿತ್ತು. ಕೇಸರಿ ಪೇಟಾ, ಶಲ್ಯ ಧರಿಸಿ, ಹಣೆಗೆ ತಿಲಕವಿಟ್ಟುಕೊಂಡು ಸಂಭ್ರಮಿಸಿದರು. ಕೇಸರಿ ಧ್ವಜಗಳನ್ನು ಹಿಡಿದು ಸಾಗಿದರು. ವಿವಿಧ ದೇವಿಯರ ವೇಷಧಾರಿ ಮಕ್ಕಳು ಸ್ತಬ್ಧಚಿತ್ರದ ವಾಹನಗಳಲ್ಲಿ ನಿಂತು ಗಮನ ಸೆಳೆದರು. ಡಿಜೆ ಮುಂದೆ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು.  ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಕಟ್ಟಡಗಳ ಮೇಲೂ ಕುಳಿತು ವೀಕ್ಷಿಸಿದರು. ಕೆಲವು ಬೀದಿಗಳಲ್ಲಿ ಭಕ್ತರು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.  ಇತ್ತೀಚೆಗೆ ಜಿಲ್ಲೆಯಿಂದ ಗಡಿಪಾರಾಗಿದ್ದ ಹಿಂದು ಜಾಗರಣ ವೇದಿಕೆ ಮುಖಂಡ ಸತೀಶ ಪೂಜಾರಿ ಅವರ ಭಾವಚಿತ್ರಗಳು ಕಂಡುಬಂದವು. ಶೋಭಾಯಾತ್ರೆಗೆ ಸತೀಶ ಪೂಜಾರಿ ಬಂದಿರಲಿಲ್ಲ, ಆದರೆ ಅವರ ಅಭಿಮಾನಿಗಳು ಮೆರವಣಿಗೆಯಲ್ಲಿ ಸತೀಶ ಪೂಜಾರಿ ಅವರ ಫೋಟೋಗಳನ್ನು ಪ್ರದರ್ಶಿಸಿದರು.  ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ. ಹರೀಶ್, ಜಿ.ಎಸ್. ಅನಿತ್ ಕುಮಾರ್, ಯಶವಂತರಾವ್ ಜಾಧವ್, ಎಸ್.ಟಿ. ವೀರೇಶ, ರಾಜನಹಳಿ ಶಿವಕುಮಾರ್, ಬಿ.ಜಿ. ಅಜಯ ಕುಮಾರ್, ಕೆ.ಎಂ. ಸುರೇಶ್, ಕೆ.ಎಂ. ವೀರೇಶ್, ಬೆಳ್ಳೂಡಿ ಮಂಜುನಾಥ್ ಸೇರಿ ಬಿಜೆಪಿಯ ಅನೇಕ ಮುಖಂಡರು, ವೈ. ಮಲ್ಲೇಶ್, ವಿನಾಯಕ ರಾನಡೆ ಇನ್ನಿತರ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net