ಶಿವರಾತ್ರಿ ಜಾಗರಣೆಗೆ ದೇವನಗರಿ ಸಜ್ಜು

dvg-market-2.jpg
Published on

ದಾವಣಗೆರೆ :  ಮಹಾ ಶಿವರಾತ್ರಿ ಹಬ್ಬಕ್ಕೆ ದೇವನಗರಿ ಸಜ್ಜಾಗುತ್ತಿದೆ. ಜಿಲ್ಲೆಯ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆಗಳು ನಡೆದಿವೆ. ಪರಮೇಶ್ವರನ ಮೂರ್ತಿಯ ವಿಶೇಷ ಅಲಂಕಾರಕ್ಕೆ ಅಣಿಗೊಳಿಸಲಾಗುತ್ತಿದೆ. ವಿದ್ಯುದ್ದೀಪ, ಬಗೆ ಬಗೆಯ ಹೂವುಗಳ ಅಲಂಕಾರದಿಂದ ಮಹಾರುದ್ರ ದೇವರ ದೇಗುಲಗಳು ಕಳೆಗಟ್ಟಿವೆ. ಪರ್ವ ಕಾಲದಲ್ಲಿ ಕಾಲಭೈರವನ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದಾರೆ.  ಬೇಸಿಗೆಯ ಬಿಸಿಲು ಜನರನ್ನು ಹೈರಾಣಾಗಿಸಿದೆ. ಆದರೆ ಶಿವರಾತ್ರಿಯ ಆಚರಣೆಗೆ ಉತ್ಸಾಹ, ಸಂಭ್ರಮವೇನೂ ಕಡಿಮೆಯಾಗಿಲ್ಲ. ಸರ್ವಶಕ್ತನಾದ ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.  ನಗರದ ಅಶೋಕ ಚಿತ್ರಮಂದಿರ ಬಳಿ ಇರುವ ಶ್ರೀ ಲಿಂಗೇಶ್ವರ ದೇವಸ್ಥಾನ, ಹಳೇ ಭಾಗದಲ್ಲಿರುವ ಪಾತಾಳ ಲಿಂಗೇಶ್ವರ ದೇಗುಲ, ಮಾರ್ಕಂಡೇಶ್ವರ ದೇವಾಲಯ, ಕೆಟಿಜೆ ನಗರದ ಮಲ್ಲಿಕಾರ್ಜುನ ದೇವಸ್ಥಾನ, ಶಂಕರ ಮಠ, ವಿದ್ಯಾನಗರದ ಶಿವಪಾರ್ವತಿ ದೇಗುಲ, ಹರಿಹರದ ಹರಿಹರೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲಾದ್ಯಂತ ರುವ ಶಿವಾಲಯಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.  ...  * ಧಾರ್ಮಿಕ ಕಾರ್ಯಗಳು  ನಗರದ ಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ರುದ್ರಾಭಿಷೇಕ, ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬುಧವಾರ ಬೆಳಗಿನ ಜಾವದಿಂದಲೇ ದರ್ಶನಕ್ಕೆ ಬರುವ ಭಕ್ತರಿಗಾಗಿ ಸಾಲಾಗಿ ನಿಲ್ಲಲು ಎಲ್ಲ ಶಿವ ದೇವಾಲಯಗಳಲ್ಲಿ ಏರ್ಪಾಟು ಮಾಡಲಾಗುತ್ತಿದೆ. ಕೆಲವು ಕಡೆ ಭಕ್ತರೇ ಅಭಿಷೇಕ ಮಾಡಲು ಅವಕಾಶ ನೀಡಲಾಗುತ್ತಿದೆ.  ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ, ಕ್ಷೀರಾಭಿಷೇಕ, ಶಿವ ಅಷ್ಟೋತ್ತರ ನಾಮಾವಳಿ, ತಿಲಾರ್ಚನೆ, ಮಹಾ ಮಂಗಳಾರತಿ ನೆರವೇರಲಿವೆ. ಭಕ್ತರಿಗೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  ...  * ಶಿವಲಿಂಗಗಳ ಬೈಕ್ ರ‌್ಯಾಲಿ  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವರಾತ್ರಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಗರದ ದೇವರಾಜ ಅರಸು ಬಡಾವಣೆಯ ‘ಬಿ’ ಬ್ಲಾಕ್‌ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ಮಂಗಳವಾರ ಬೆಳಗ್ಗೆ ಶಿವಧ್ಯಾನ ಮಂದಿರದಿಂದ 108 ಶಿವಲಿಂಗಗಳ ಮೋಟಾರ್ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬುಧವಾರ 108 ಶಿವಲಿಂಗಗಳೊಂದಿಗೆ ಸದ್ಭಾವನಾ ಶಾಂತಿಯಾತ್ರೆ ಆಯೋಜಿಸಲಾಗಿದೆ.  ನಮನ ಅಕಾಡೆಮಿಯ ಕಲಾವಿದರು ನಗರದ ವಿವಿಧ ಶಿವ ದೇವಾಲಯಗಳಲ್ಲಿ ‘ಶಿವಸ್ಮರಣೆ’ ನೃತ್ಯ ಜಾಗರಣೆ ನಡೆಸಿಕೊಡಲಿದ್ದಾರೆ. ಚಿರಂತನ ಅಕಾಡೆಮಿ ಕಲಾವಿದರು ಎಸ್‌ಎಸ್ ಲೇಔಟ್‌ನ ಅಥಣಿ ಕಾಲೇಜು ಆವರಣದಲ್ಲಿರುವ ಶಿವನ ಮೂರ್ತಿಯ ಮುಂದೆ ಈ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.  ...   * ಮಾರುಕಟ್ಟೆಯಲ್ಲಿ ಖರೀದಿ ಭರಾಟೆ  ನಗರದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳ ಖರೀದಿ ಜೋರಾಗಿತ್ತು. ಪ್ರವಾಸಿ ಮಂದಿರ ರಸ್ತೆ, ಗಡಿಯಾರ ಕಂಬ, ಚಾಮರಾಜ ಪೇಟೆ, ಶಾಮನೂರು ರಸ್ತೆ, ಹದಡಿ ರಸ್ತೆ ಇನ್ನಿತರ ಕಡೆ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳ ರಾಶಿ ಕಂಡುಬಂದಿತು.  ಬನಸ್ಪತಿ, ದ್ರಾಕ್ಷಿ, ಕಿತ್ತಳೆ ಹಣ್ಣು, ಬಣ್ಣ ಬಣ್ಣದ ಸೇವಂತಿಗೆ, ಬಿಡಿ ಹೂವುಗಳು, ಖರ್ಜೂರ, ಬಿಲ್ವಪತ್ರೆ, ತುಳಸಿ, ಮಾವಿನ ಎಲೆಗಳು, ವೀಳ್ಯದೆಲೆ ಸೇರಿದಂತೆ ಹಬ್ಬಕ್ಕೆ ಬೇಕಾದ ಪದಾರ್ಥಗಳ ಮಾರಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net