ಶಿವಾಜಿ ಮಹಾರಾಜರ ಶೌರ್ಯ ಇಂದಿನ ಜನಾಂಗಕ್ಕೆ ಸ್ಫೂರ್ತಿ

dvg-shivaji-jayanti.jpg
Published on

ದಾವಣಗೆರೆ :  ಶಿವಾಜಿ ಮಹಾರಾಜರ ಹೋರಾಟ ಮನೋಭಾವ, ಧೈರ್ಯ ಹಾಗೂ ಶೌರ್ಯ ಇಂದಿನ ಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಶೌರ್ಯಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ. ಶೋಷಿತರ, ಮಹಿಳೆಯರ, ಬಡವರ ಪರವಾಗಿ ಶಿವಾಜಿ ಕೆಲಸ ಮಾಡಿದರು. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಸಮಾಜದ ಎಲ್ಲ ವರ್ಗದ ಜನರನ್ನು ರಕ್ಷಣೆ ಮಾಡಿದರು ಎಂದು ತಿಳಿಸಿದರು.  ಹಿಂದು ಧರ್ಮ ರಕ್ಷಣೆ ಮಾಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಮೊಘಲರ ವಿರುದ್ಧ ಅನೇಕ ಯುದ್ಧಗಳನ್ನು ಮಾಡಿ ಅವರನ್ನು ಸೋಲಿಸಿ ಮರಾಠ ಚಕ್ರವರ್ತಿ ಎಂದು ಗುರುತಿಸಿಕೊಂಡರು. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸ ಎನಿಸುತ್ತದೆ. ಶಿವಾಜಿಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸೋಣ ಎಂದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್ ಸಾಬ್, ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್, ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net