ಸಹಸ್ರ ಕಂಠದಲ್ಲಿ ಸ್ತೋತ್ರ ಸಮರ್ಪಣೆ

dvg-shankara-2.jpg
Published on

ದಾವಣಗೆರೆ :  ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾ ಘಟಕದಿಂದ, ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಅಂಗವಾಗಿ ‘ಕಲ್ಯಾಣವೃಷ್ಟಿ  ಮಹಾ ಅಭಿಯಾನ-ಸ್ತೋತ್ರ ಸಮರ್ಪಣೆ’ ಕಾರ್ಯಕ್ರಮ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.  ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳಿಂದ ಆಗಮಿಸಿದ್ದ 1 ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ, ‘ಕಲ್ಯಾಣ ವೃಷ್ಟಿಸ್ತವ’, ‘ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ’ ಮತ್ತು ‘ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ’ ಗಳು ಸಹಸ್ರ ಕಂಠದಿಂದ ಸಮರ್ಪಣೆಗೊಂಡವು.  ವಿವಿಧ ಭಜನಾ ಮಂಡಳಿಗಳ ಸದಸ್ಯರು ಸುಶ್ರಾವ್ಯವಾಗಿ ಭಜನೆಯನ್ನು ಪ್ರಸ್ತುತಪಡಿಸಿದರು. ಭಜಿಸುವೆ ಗಜಮುಖ ದೇವನ (ಗಣೇಶ ಕೀರ್ತನೆ), ಲೋಕಮಾತೆ ವಿಮಲ ಚರಿತೆ (ಶ್ರೀ ಶಾರದಾ ಕೀರ್ತನೆ), ವಂದನಂ ಗುರು ವೀರನೆ (ಶ್ರೀ ಶಂಕರಾಚಾರ್ಯರ ಕೀರ್ತನೆ), ಜಗದ್ಗುರೋ ಜಯ ಜಗದ್ಗುರೋ (ಜಗದ್ಗುರು ಚರಿತ್ರೆ), ಜಯ ದೇವ ಜಯ ದೇವ ಜಯ ಸದ್ಗುರು ನಾಥ (ಶ್ರೀ ಶೃಂಗೇರಿ ಜಗದ್ಗುರು ಕೀರ್ತನೆ), ಗರುಡಗಮನ ತವ (ಶ್ರೀಕೃಷ್ಣ ಕೀರ್ತನೆ) ಗೀತೆಗಳನ್ನು ಗಾಯನ ಮಾಡಲಾಯಿತು. ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಶತನಾಮ ಪಠಣ ಮಾಡಲಾಯಿತು.  ಅಭಿಯಾನದ ರಾಜ್ಯ ಸಂಚಾಲಕ ಉಮೇಶ ಹರಿಹರ ಪ್ರಾಸ್ತಾವಿಕ ಮಾತನಾಡಿ, ಶ್ರೀ ಶಂಕರಾಚಾರ್ಯರು ಸನಾತನ ಧರ್ಮವನ್ನು 3 ಮಾರ್ಗಗಳ ಮೂಲಕ ಪ್ರಚಾರ ಮಾಡಿದರು. ಕೃತಿಗಳ ರಚನೆ, ವಿಜಯ ಯಾತ್ರೆ ಮತ್ತು ದೇಶದಲ್ಲಿ 4 ಪೀಠಗಳನ್ನು ಸ್ಥಾಪಿಸಿ ಜ್ಞಾನ ಪ್ರಸಾರ ಕೈಗೊಂಡರು. ಆ ಪೀಠಗಳ ಪೈಕಿ ಶೃಂಗೇರಿ ಪೀಠವೂ ಒಂದಾಗಿದ್ದು ತನ್ನದೇ ಆದ ಪರಂಪರೆಯನ್ನು ಹೊಂದಿದೆ ಎಂದು ತಿಳಿಸಿದರು.  ಅ. 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಅಭಿಯಾನ ನಡೆಯಲಿದ್ದು 2 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.  ಡಾ.ಬಿ.ಟಿ. ಅಚ್ಯುತ್ ಇದ್ದರು. ಜಿಲ್ಲಾ ಸಂಚಾಲಕ ಚಿದಂಬರ ದೀಕ್ಷಿತ್ ಸ್ವಾಗತಿಸಿದರು. ದಾವಣಗೆರೆಯ ಗಾಯತ್ರಿ ಭಜನಾ ಮಂಡಳಿಯ ಸದಸ್ಯರು ಪ್ರಾರ್ಥನೆ ಮಾಡಿದರು. ಹರಿಹರದ ಶಾರದಾ ಶಂಕರ ಭಕ್ತ ಮಂಡಳಿಯವರಿಂದ ಶಾಂಕರ ಸ್ತೋತ್ರ ಗಾಯನ ನಡೆಯಿತು. ತಾಲೂಕು ಸಂಚಾಲಕಿ ನಳಿನಿ ಅಚ್ಯುತ್ ವಂದಿಸಿದರು. ಗುರುಪ್ರಸಾದ ನಾಡಿಗೇರ್ ನಿರೂಪಿಸಿದರು. ದೀಪ ಪ್ರಜ್ವಲನೆ, ಗುರುವಂದನ, ಫಲ ಸಮರ್ಪಣೆ, ಆರತಿ ಕಾರ್ಯಕ್ರಮಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net