

ದಾವಣಗೆರೆ : ಇಲ್ಲಿನ ಗಾಂಧಿನಗರದ ಪಕ್ಕದಲ್ಲಿರುವ ಗುಂಡಿ ಹೊಲದಲ್ಲಿ ಬುಧವಾರ ಸುರಿದ ನಿರಂತರ ಮಳೆಯಿಂದ ಬೃಹತ್ ಮರ ಬಿದ್ದು, ಐದು ಮನೆಗಳಿಗೆ ಹಾನಿಯುಂಟಾಗಿತ್ತು. ಆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದಾರೆ. ಶಾಸಕರ ಆದೇಶದ ಮೇರೆಗೆ ಹಾನಿಗೊಳಗಾದ ಸ್ಥಳಕ್ಕೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಅಯೂಬ್ ಪೈಲ್ವಾನ್, ಎ. ನಾಗರಾಜ, ಸಾಗರ್ ಎಲ್.ಎಚ್, ವಾರ್ಡ್ ಅಧ್ಯಕ್ಷ ಟಿ. ರಮೇಶ್, ಜಿ.ರಾಕೇಶ್ ಭೇಟಿ ನೀಡಿದ್ದರು. ಇದೇ ವೇಳೆ ಸ್ಥಳಕ್ಕೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳು, ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ತಂಡವನ್ನು ಕರೆಯಿಸಿ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಆದಷ್ಟು ಶೀಘ್ರ ಪರಿಹಾರ ನೀಡಬೇಕೆಂದು ದಿನೇಶ್.ಕೆ.ಶೆಟ್ಟಿ ಸೂಚಿಸಿದರು.