ಸಿದ್ದೇಶ್ವರ ವಿರುದ್ಧ ಶಾಮನೂರು ವಾಗ್ದಾಳಿ

Shamanur-Shivashakarppa-dvg-south-Copy_20240801000732344.jpg
Published on

ದಾವಣಗೆರೆ : ಕಾಂಗ್ರೆಸ್‌ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬಿಜೆಪಿಯ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ‘ಅಡಕೆ, ಸುಪಾರಿ ವ್ಯವಹಾರದಲ್ಲಿ ತೆರಿಗೆ ವಂಚಿಸಿ ಹಣ ಮಾಡಿದ್ದಾರೆ. ಸಂಸದರಾಗಿದ್ದಾಗ ಬಸ್ ತಂಗುದಾಣಗಳ ನಿರ್ಮಾಣದಲ್ಲಿ ದುಡ್ಡು ಮಾಡಿಕೊಂಡರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೈರತಿ ಬಸವರಾಜ್ ಅವರೊಂದಿಗೆ ಶಾಮೀಲಾಗಿ ಲಾಭ ಮಾಡಿಕೊಂಡರು ಎಂದು ಆರೋಪ ಮಾಡಿದರು.  ಅಕ್ರಮ ಮಾರ್ಗದಲ್ಲಿ ಸಂಪಾದಿಸಿ ಸಾಹುಕಾರಿಕೆ ತೋರಿಸಿಕೊಳ್ಳುತ್ತಿದ್ದಾರೆ, ಅದು ಬಹಳ ದಿನ ಉಳಿಯುವುದಿಲ್ಲ. ಅವರಿಗಿಂತ ಮೊದಲು ನಾವು ಶ್ರೀಮಂತರಾಗಿದ್ದೇವೆ ಎಂದು ಟಾಂಗ್ ಕೊಟ್ಟರು.  72 ವರ್ಷದ ಸಿದ್ದೇಶ್ವರ 93 ವರ್ಷದ ನನಗೆ ಬುದ್ಧಿ ಹೇಳಲು ಬರುತ್ತಾನೆ. ಆತನಿಂದ ನಾನು ಹೇಳಿಸಿಕೊಳ್ಳಬೇಕಾಗಿಲ್ಲ. ಆತನನ್ನು ಭೀಮಸಮುದ್ರದಿಂದ ದಾವಣಗೆರೆಗೆ ಕರೆದುಕೊಂಡು ಬಂದವರೇ ನಾವು ಎಂದು ಮರೆತಂತಿದೆ ಎಂದರು.  ‘ಜಿಂಕೆ ಪ್ರಕರಣದ ಹಿನ್ನೆಲೆಯಲ್ಲಿ ನಾವು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಅತ್ತಿರುವುದಾಗಿ ಸಿದ್ದೇಶ್ವರ ಹೇಳಿದ್ದಾರೆ. ನಾವು ಅಳುವವರಲ್ಲ, ಸೆಡ್ಡು ಹೊಡೆಯುವ ಜನ’ ಎನ್ನುವ ಮೂಲಕ ತಿರುಗೇಟು ನೀಡಿದರು.  ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅವರ ಅಪ್ಪನ ಮನೆ ಗಂಟು ಹೋಗಿರುವಂತೆ ಗೋಳಾಡುತ್ತಿದ್ದಾರೆ. ಅಧಿಕಾರ ಬರುತ್ತದೆ, ಹೋಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.  ನಾವು ಮತ್ತು ನಮ್ಮ ಮಕ್ಕಳು ಒಳ್ಳೆಯ ಮಾರ್ಗವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಯೋಚಿಸಿ ಹೇಳಿಕೆ ನೀಡಲಿ. ಬೇಕಿದ್ದರೆ ಮುಖಾಮುಖಿಯಾಗಿ ಕುಳಿತು ಚರ್ಚಿಸಲು ಸಿದ್ಧ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net