

ದಾವಣಗೆರೆ : ಬಂಜಾರ ಸಮುದಾಯದ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಇದುವರೆಗೆ 40 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ದಿ ನಿಗಮದಿಂದ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ (ಭಾಯಾಗಡ) ಶುಕ್ರವಾರ ಏರ್ಪಡಿಸಿದ್ದ, ಸಂತ ಸೇವಾಲಾಲ್ ಅವರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಸಂತ ಸೇವಾಲಾಲ್ ಅವರು ನೀತಿವಂತರು, ತತ್ವ, ಸಿದ್ಧಾಂತಗಳ ಪ್ರತಿಪಾದಕರಾಗಿದ್ದರು. ಅವರ ಆರಾಧನೆಗಾಗಿ ರಾಜ್ಯದಲ್ಲಿ ಇಲಾಖೆಯಿಂದ 1500 ಕ್ಕೂ ಹೆಚ್ಚು ಬಂಜಾರ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಎಂದು ವಿವರಿಸಿದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಲಂಬಾಣಿ ಸಮುದಾಯದವರು ಪರಿಶ್ರಮಿಗಳಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕಿದೆ. ಸಂತ ಸೇವಾಲಾಲ್ ಅವರ ಆಶಯಗಳನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇನ್ನಷ್ಟು ಯೋಜನೆ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲೂ ನೆರವು ಸಿಕ್ಕಿದೆ, 2013 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗಲೂ ಬಹಳಷ್ಟು ಅನುದಾನ ಒದಗಿಸಿದರು ಎಂದು ತಿಳಿಸಿದರು. ಸಮುದಾಯದಲ್ಲಿ ಉದ್ಯೋಗ ಅರಸಿ ವಲಸೆ ಹೋಗುವ ಜನರ ಮಕ್ಕಳಿಗಾಗಿ ವಸತಿಶಾಲೆ ಸ್ಥಾಪನೆಯ ಅಗತ್ಯವಿದೆ. ಜೋಗದಿಂದ ಚಿನ್ನಿಕಟ್ಟೆ ವರೆಗಿನ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು. ಹಾಡಿ, ಹಟ್ಟಿ, ತಾಂಡಾ ನಿವಾಸಿಗಳಿಗೆ ಇ-ಸ್ವತ್ತು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಸೌರವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಶಾಸಕ ಡಾ.ಚಂದ್ರು ಕೆ.ಲಮಾಣಿ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್, ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಕೆ. ಶಿವಮೂರ್ತಿ ನಾಯ್ಕ, ಮಾಜಿ ಶಾಸಕರಾದ ಪಿ. ರಾಜೀವ್, ಬಸವರಾಜ್ ನಾಯ್ಕ್, ಜಲಜಾ ನಾಯ್ಕ್ ಇದ್ದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ವಾಗತಿಸಿದರು. ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಇದ್ದರು. ಗಾಯಕ ಉಮೇಶ ನಾಯ್ಕ ಬಂಜಾರ ಸಮುದಾಯದ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಹನಾ ಮತ್ತು ಸಂಗಡಿಗರು ಲಂಬಾಣಿ ನೃತ್ಯ ಪ್ರದರ್ಶಿಸಿದರು. ...