

lಹೊನ್ನಾಳಿ : ಬಂಜಾರ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲರ ಜಯಂತ್ಯುತ್ಸವಕ್ಕೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಬುಧವಾರ ಸಂಭ್ರಮದ ಚಾಲನೆ ದೊರೆಯಿತು.
ನಾಡಿನ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಉತ್ಸವದ ಸಡಗರದಲ್ಲಿ ಭಾಗಿಯಾದರು. ಬೆಳಗ್ಗೆಯಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಜಯಂತ್ಯುತ್ಸವ ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಂಜಾರ ಸಮಾಜಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ಬರುವಂತೆ ಮಾಡುವುದಾಗಿ ಭರವಸೆ ನೀಡಿದರು.
ಈ ಹಿಂದೆ ನಮ್ಮ ತಂದೆ ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಡೆಂಟಲ್ ಕಾಲೇಜು ಬೇಕೆಂಬ ನಿಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಮಂಜೂರು ಮಾಡಿದ್ದರು ಎಂದು ನೆನಪಿಸಿದರು.
ಪೂರ್ವ ಜನ್ಮದ ಪುಣ್ಯದಿಂದ ನಾನು ಶಿಕ್ಷಣ ಸಚಿವನಾಗಿದ್ದೇನೆ. 14 ಸಾವಿರ ಶಾಲೆಗಳಲ್ಲಿ 1.20 ಕೋಟಿ ವಿದ್ಯಾರ್ಥಿಗಳ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ನಿರೀಕ್ಷೆಗೆ ಮೀರಿ ನನ್ನ ಖಾತೆಯನ್ನು ನಿರ್ವಹಿಸುತ್ತೇನೆ. ಮಕ್ಕಳಲ್ಲೇ ದೇವರನ್ನು ಕಾಣುತ್ತಿದ್ದೇನೆ ಎಂದರು.
ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ನೀವು ಸಮಾಜಮುಖಿ ಆಗಬೇಕಾದರೆ ಇದು ಬಹಳ ಮುಖ್ಯ. ಇತರರ ಮೇಲೆ ಅವಲಂಬಿಸದೆ, ಸಾಧನೆಯ ಮೂಲಕ ಬೆಳೆಯಬೇಕು ಎಂದು ಸಲಹೆ ನೀಡಿದರು.
ಲಂಬಾಣಿ ಜನಾಂಗ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಬಂಜಾರ ಸಂಪ್ರದಾಯ, ಮೌಖಿಕ ಸಾಹಿತ್ಯ, ವೇಷಭೂಷಣ, ಕಲೆಗಳ ಸಂರಕ್ಷಣೆ, ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಂತ ಸೇವಾಲಾಲರು 17, 18ನೇ ಶತಮಾನದಲ್ಲಿ ಅಹಿಂಸಾ ತತ್ವ, ಶಾಂತಿಯ ಸಂಕೇತವನ್ನು ಪ್ರತಿಪಾದಿಸಿದರು. ಅಲೆಮಾರಿಗಳಾಗಿದ್ದ ಈ ಸಮಾಜದ ಜನರ ಸಾಂಸ್ಕೃತಿಕ ಮತ್ತು ಆರ್ಥಿಕ ಮುನ್ನಡೆಯಲ್ಲಿ ಸಂತ ಸೇವಾಲಾಲರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಸೂರಗೊಂಡನ ಕೊಪ್ಪದಲ್ಲಿ ಶಾಲೆ, ಕಾಲೇಜು ಸ್ಥಾಪನೆ, ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಸೇರಿ ಪಕ್ಷಾತೀತವಾಗಿ ಕೋಟ್ಯಂತರ ರೂ. ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಅದರಲ್ಲೂ ನಮ್ಮ ಸರ್ಕಾರ ಅತಿ ಹೆಚ್ಚು ಅನುದಾನ ನೀಡಿದೆ. ವಸತಿ ಶಾಲೆಗೆ 15 ಎಕರೆ ಜಮೀನು ಮಂಜೂರಾಗಿದೆ. ಕೌಶಲ ಅಭಿವೃದ್ಧಿ, ತಾಂಡಾ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಇಲ್ಲಿ ಪ್ರತಿನಿತ್ಯ ಬರುವ ಪ್ರವಾಸಿಗರಿಗೆ ಅನ್ನ ದಾಸೋಹ ನಡೆಯುತ್ತಿದೆ ಎಂದರು. ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಮತ್ತಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರದ ಪೌರಗಡ್‌ನ ಬಾಬು ಸಿಂಗ್ ಮಹಾರಾಜ್, ಸಾಲೂರು ಮಠದ ಶ್ರೀ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಕೆ. ರಾಥೋಡ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್, ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ್, ಶಿವಮೂರ್ತಿ ನಾಯ್ಕ್, ಜಿ.ಎಂ. ಲಿಂಗರಾಜ್, ಜಿ.ಎಸ್. ಅನೀತ್, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಪ್ರಧಾನ ಧರ್ಮದರ್ಶಿ ಹೀರಾನಾಯ್ಕ್, ಕಾರ್ಯದರ್ಶಿ ಅರುಣ್ ಕುಮಾರ್ ಇದ್ದರು.