ದಾವಣಗೆರೆಯಲ್ಲಿ ಮತ್ತೆ ಸರಗಳ್ಳರ ಹಾವಳಿ

Crime Logo
Published on

ದಾವಣಗೆರೆ: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಿದ್ದು, ಪಾದಚಾರಿ ಮಹಿಳೆಯರೇ ಇವರ ಟಾರ್ಗೆಟ್. ಸೋಮವಾರ ಹಾಡಹಗಲಲ್ಲೇ ಮೂರು ಪ್ರಕರಣ ವರದಿಯಾಗಿದ್ದು, ಪಲ್ಸರ್ ಬೈಕ್‌ನಲ್ಲಿ ಬರುವ ಸವಾರರಿಬ್ಬರು ಈ ಕೃತ್ಯವೆಸಗಿದ್ದಾರೆ.

ನಗರದ ಸಿದ್ದರಾಮೇಶ್ವರ ಬಡಾವಣೆಯ ಸಿದ್ಧಗಂಗಾ ಶಾಲೆ ಹಿಂಬದಿ ರಸ್ತೆಯಲ್ಲಿ ಬೆಳಗ್ಗೆ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣ ವರದಿಯಾಗಿವೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ ಗಾಮದ ಖಾಸಗಿ ಶಾಲೆ ಶಿಕ್ಷಕಿ ಗಾಯತ್ರಿ, ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆಂದು ಸಿದ್ಧ್ದಗಂಗಾ ಶಾಲೆಗೆ ತೆರಳುತ್ತಿದ್ದ ವೇಳೆ 5 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಲಪಟಾಯಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಾವಳಿ ಚಿತ್ರೀಕರಣವಾಗಿದ್ದು ಸರಗಳ್ಳರ ಚೆಹರೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ನಿಟ್ಟುವಳ್ಳಿಯ ಆದರ್ಶ ಶಾಲೆ ಬಳಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಕೆಟಿಜೆ ನಗರ ವಾಸಿ ಎಸ್.ಗೀತಾ ಎಂಬುವರು ರಸ್ತೆಯಲ್ಲಿ ಹೋಗುತ್ತಿದ್ದಾಗ 15 ಗ್ರಾಂ ತೂಕದ 60 ಸಾವಿರ ರೂ. ಮೌಲ್ಯದ ಚಿನ್ನದ ಸರ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿವೆ.

ಕೆ.ಬಿ.ಬಡಾವಣೆ ವಾಸಿ, ಅಂಗವಿಕಲರ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ಶಾಲೆಯ ಶಿಕ್ಷಕಿ ಯಶೋದಮ್ಮ, ಬೆಳಗ್ಗೆ ಎಸ್‌ಎಸ್ ಮಾಲ್ ಕಡೆಯಿಂದ ಶಾಲೆಯತ್ತ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಸವಾರರಿಬ್ಬರು 1.5 ಲಕ್ಷ ರೂ. ಮೌಲ್ಯದ 5 ತೊಲ ತೂಕದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net