ಜ್ಞಾನವೇ ಜೀವನದ ಯಶಸ್ಸಿನ ಮಾರ್ಗ

sharana.jpg
Published on

ದಾವಣಗೆರೆ : ಜ್ಞಾನವೇ ಜೀವನದ ಯಶಸ್ಸಿನ ಮಾರ್ಗ. ಜ್ಞಾನವಿಲ್ಲದ ಮಾನವ ಜೀವನ ಅಪೂರ್ಣ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಬಿಇಎ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಇಂದುಮತಿ ಎಂ. ಪಾಟೀಲ ದತ್ತಿ ಮತ್ತು ಶರಣ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ವಿಷಯ ಕುರಿತು ಮಾತನಾಡಿದರು.

ಜ್ಞಾನಕ್ಕಿಂತ ಮಿಗಿಲು ಮತ್ತು ಪವಿತ್ರವಾದದ್ದು ಯಾವುದೂ ಇಲ್ಲ. ಜ್ಞಾನ ಎಂದರೆ ತಿಳಿವಳಿಕೆ, ವಿಷಯಗಳ ಗ್ರಹಣ ಮತ್ತು ಪ್ರಾಜ್ಞತೆ. ಅಜ್ಞಾನ ಎಂದರೆ ಜ್ಞಾನದ ಕೊರತೆ. ಜೀವನದಲ್ಲಿ ಜ್ಞಾನ ಸಂಪಾದಿಸದೇ ಇರುವವನು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಣ ಆಸ್ತಿಗಿಂತಲೂ ಮುಖ್ಯವಾದ ಸಂಪತ್ತು ಜ್ಞಾನ. ಅದು ಎಂದಿಗೂ ಖಾಲಿಯಾಗದ ಭಂಡಾರ. ಜ್ಞಾನದ ಕೊರತೆಯಿಂದ ವ್ಯಕ್ತಿಯು ಜೀವನದಲ್ಲಿ ಮೋಸ ಹೋಗುವ ಹಾಗೂ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ ಎಂದರು.

ವಿದ್ಯಾರ್ಥಿಗಳು ಸುಜ್ಞಾನ ವೃದ್ಧಿಸಿಕೊಳ್ಳುವ ಮೂಲಕ ಎಲ್ಲ ಮೌಢ್ಯ ಮತ್ತು ಅಂಧಕಾರ ತೊಡೆದುಹಾಕಿ ಸಮಾಜದ ಉತ್ತಮ ಆಸ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸಿ.ಜೆ.ನೀತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶರಣರ ವಚನಗಳ ಮೌಲ್ಯವನ್ನು ಅನುಸರಿಸಿ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಮಕ್ಕಳಲ್ಲಿ ವಚನ ಸಾಹಿತ್ಯ ಮತ್ತು ವಚನಕಾರರ ಜೀವನ ದರ್ಶನ ಪರಿಚಯ ಮಾಡಿಸುವ ಮಹತ್ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಬಿಇಎ ಹೈಯರ್ ಪ್ರೈಮರಿ ಸ್ಕೂಲ್‌ನ ಪ್ರಾಚಾರ್ಯ ಎಚ್.ಎಸ್.ಸತೀಶ್ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಮಮತಾ ನಾಗರಾಜ್, ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಟಿ. ಸಣ್ಣಮಂಜುನಾಥ್, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ ಇದ್ದರು.

ದತ್ತಿ ದಾನಿಗಳಾದ ಶಂಕರ್ ಸಿ.ಅಕ್ಕಿಹಾಳ ಇವರನ್ನು ಗೌರವಿಸಲಾಯಿತು. ಸಹಶಿಕ್ಷಕಿ ಆರ್.ಡಾ.ಗೀತಾ ವಂದಿಸಿದರು. ಕಾರ್ಯದರ್ಶಿ ಬಿ.ಟಿ. ಸಹಶಿಕ್ಷಕ ಬಸವರಾಜ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net