ಎಂಬಿಎ ಪದವೀಧರರಿಂದ ದೇಶದ ಬದಲಾವಣೆ ಸಾಧ್ಯ

gmit.jpg
Published on

ದಾವಣಗೆರೆ : ಎಂಬಿಎ ಎನ್ನುವುದು ದೊಡ್ಡ ಭೌತಿಕ ಸವಾಲು. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಎಂಬಿಎ ಪದವೀಧರರು ಬಹುದೊಡ್ಡ ಬದಲಾವಣೆ ತರಲು ಸಾಧ್ಯವಿದೆ ಎಂದು ಬ್ರಿಟನ್‌ನ ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಉಪನ್ಯಾಸಕ ಲೆಬರ್ನ್ ರೋಸ್ ಹೇಳಿದರು.
 ನಗರದ ಜಿ.ಎಂ. ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಜಿಎಂಐಟಿ ಕಾಲೇಜಿನ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಾಣಿಜ್ಯ ಶಿಕ್ಷಣ-ಗಡಿ ದಾಟಿ ಸಂಪರ್ಕ-ಭವಿಷ್ಯ ರೂಪಿಸುವುದು‘ ವಿಷಯ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 ಜೀವನದಲ್ಲಿ ಸಣ್ಣ ಪರಿಣಾಮಗಳೇ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಇವುಗಳನ್ನು ಯಾರೂ ಕಡೆಗಣಿಸಬಾರದು. ನೀವು ತರುವಂತಹ ಚಿಕ್ಕ ಬದಲಾವಣೆ ಮಹತ್ವದ ಬದಲಾವಣೆಗೆ ಕಾರಣವಾಗಿ ದೇಶಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
 ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹಾಗೂ ಸ್ವಯಂ ಕೌಶಲ ಹೆಚ್ಚಿಸಿಕೊಳ್ಳಲು ನಾನು ಯುಕೆ ಕಾಲೇಜೊಂದರಲ್ಲಿ ಎಂಬಿಎ ಪ್ರಾರಂಭಿಸಿದ್ದೆ. ಇದು ಹಲವರ ಬದುಕಿನಲ್ಲಿ ಬದಲಾವಣೆ ತಂದಿದೆ ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡರು.
 ಜಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್.ಆರ್. ಶಂಕಪಾಲ್ ಮಾತನಾಡಿ, ಜಾಗತಿಕ ನಾಗರಿಕರಾಗಿರುವ ವಿದ್ಯಾರ್ಥಿ ಯುವಜನರು ವಿಶ್ವದ ಯಾವುದೇ ದೇಶದಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದೆ. ಇದಕ್ಕಾಗಿ ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು.
 ಎಂಬಿಎ ಹಾಗೂ ಎಂಕಾಂ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯಕವಾಗಿದ್ದು, ದೊಡ್ಡ ನಗರಗಳಿಂದ ಬರುವ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಕಾಲೇಜಿನ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹಾಗೂ ಆಕಾಂಕ್ಷೆ ಹೆಚ್ಚಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
 ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಹೊಂದುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಪದವಿಯ ನಂತರ ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸುವುದು ನಮ್ಮ ಕರ್ತವ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಶಿಕ್ಷಣದ ಕುರಿತು ಹಮ್ಮಿಕೊಂಡಿರುವ ವಿಚಾರ ಸಂಕಿರಣ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದರು.
 ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಮತ್ತೊಬ್ಬ ಉಪನ್ಯಾಸಕ ಲಾರೆನ್ಸ್ ಫಿಶರ್ ಮಾತನಾಡಿದರು. ಉಪಕುಲಪತಿ ಡಾ.ಮಹೇಶಪ್ಪ, ರಿಜಿಸ್ಟ್ರಾರ್ ಡಾ. ಸುನಿಲ್‌ಕುಮಾರ್, ನಿರ್ದೇಶಕ ಡಾ.ಬಿ. ಬಕ್ಕಪ್ಪ, ಜಿಎಂಐಟಿ ಕಾಲೇಜು ಡಾ.ಸಂಜಯ್ ಪಾಂಡೆ ಇದ್ದರು. ಎಂಬಿಎ ವಿಭಾಗದ ಮುಖ್ಯಸ್ಥ ಪಿ.ಎಸ್. ಬಸವರಾಜ್ ಸ್ವಾಗತಿಸಿದರು, ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ನಿರ್ದೇಶಕ ಶಿವಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net