ಬಾಹ್ಯಾಕಾಶ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಿ

dvg-science.jpg
Published on

ದಾವಣಗೆರೆ : ಈ ತಿಂಗಳಲ್ಲಿ ಮೂರು ಬಾಹ್ಯಾಕಾಶ ವಿಸ್ಮಯಗಳು ನಡೆಯಲಿವೆ. ಇವುಗಳನ್ನು ಮತ್ತೆ ನಮ್ಮ ಜೀವಮಾನದಲ್ಲಿ ಕಾಣಲಾರೆವು. ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಖಗೋಳ ತಜ್ಞ ಎಂ.ಟಿ. ಶರಣಪ್ಪ ಹೇಳಿದರು.  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ, ಜಿಲ್ಲಾ ಬಾಲಭವನ ಸಹಯೋಗದಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಆಕಾಶದ ಕೌತುಕ 2024’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅ. 12 ರಂದು ಧೂಮಕೇತು ಸಿ/2023 ಎ3 (ಸುಚೇಶನ್-ಅಟ್ಲಾಸ್) ಭೂಮಿಗೆ ಬಹಳ ಹತ್ತಿರಕ್ಕೆ ಬರಲಿದೆ. ಇದು ಮತ್ತೊಮ್ಮೆ ಭೂಮಿಯ ಹತ್ತಿರಕ್ಕೆ ಬರುವುದು 80 ಸಾವಿರ ವರ್ಷಗಳ ನಂತರ. ಇದೇ ತಿಂಗಳ 14 ರಂದು ರಾತ್ರಿ 12 ಗಂಟೆ 18 ನಿಮಿಷದಿಂದ 1 ಗಂಟೆ 20 ನಿಮಿಷದ ವರೆಗೆ ಶನಿ ಗ್ರಹವು ಚಂದ್ರನ ಹಿಂದಕ್ಕೆ ಚಲಿಸುತ್ತದೆ. ಬರಿಗಣ್ಣಿಗೆ ಗೋಚರಿಸುವ ಈ ವಿದ್ಯಮಾನವನ್ನು ಸಾಧಾರಣ ಬೈನಾಕ್ಯುಲರ್ ಮೂಲಕ ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ ಎಂದರು.  ಮೂರನೆಯ ಕೌತುಕವೆಂದರೆ, 1986 ರಲ್ಲಿ ನಮಗೆ ಕಾಣಿಸಿದ್ದ ಹ್ಯಾಲಿ ಧೂಮಕೇತು ಉಳಿಸಿಹೋದ ಅದರ ತ್ಯಾಜ್ಯಗಳ ಉಲ್ಕಾವರ್ಷ ಒರಾಯನ್ ನಕ್ಷತ್ರ ಪುಂಜದಲ್ಲಿ ಅ. 21 ರಂದು ಕಂಡುಬರುತ್ತದೆ. ಗಂಟೆಗೆ 25 ರಿಂದ 30 ಉಲ್ಕೆಗಳು ಉರಿದು ಬೀಳುತ್ತವೆ ಇದೊಂದು ಕಣ್ಣಿಗೆ ಹಬ್ಬ. ಇಂತಹ ಅದ್ಭುತ ಅವಕಾಶಗಳನ್ನು ನೋಡಲು ಮರೆಯದಿರಿ ಎಂದು ತಿಳಿಸಿದರು.  ಧರಾಮ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜೆ.ಬಿ. ರಾಜ್ ಮಾತನಾಡಿ, ವಿದ್ಯಾವಂತರಲ್ಲೇ ಅತಿಹೆಚ್ಚು ಮೌಢ್ಯ ಆಚರಣೆ ಕಾಣುತ್ತಿದ್ದು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  ಬೆಕ್ಕು ದಾರಿಗೆ ಅಡ್ಡ ಬಂದರೆ ಸ್ವಲ್ಪ ಸಮಯ ನಿಂತು ಚಲಿಸುತ್ತೇವೆ. ಪ್ರಜ್ಞಾವಂತರೆನಿಸಿ ಕೊಂಡವರೇ ಹಾಗೆ ಮಾಡುತ್ತಾರೆ. ಅದರಿಂದ ಹಲವರಿಗೆ ನಾವು ಮೌಢ್ಯ ಕಲಿಸಿದಂತಾಗುತ್ತದೆ. ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.  ಜಗತ್ತಿನಲ್ಲಿ ನಡೆಯುವ ಕೌತುಕಗಳನ್ನು ನೋಡುವ ಅದ್ಭುತ ಅವಕಾಶಗಳನ್ನು ಯಾರೂ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುಪ್ರಸಾದ್ ಮಾತನಾಡಿ, ನಾವು ಪ್ರತಿದಿನ ಆಕಾಶ ನೋಡುತ್ತೇವೆ. ಅದರ ಬಗ್ಗೆ ಕೌತುಕಭರಿತ ಅಂಶಗಳ ಕುರಿತು ಯೋಚಿಸುವುದು ಕಡಿಮೆ. ಆದರೆ ಆಕಾಶ ಎಷ್ಟು ವಿಶಾಲವಾಗಿದೆಯೋ ಅಷ್ಟೇ ಕೌತುಕವಾಗಿದೆ. ಅದನ್ನು ನೋಡುವ ನಮ್ಮ ಒಳದೃಷ್ಟಿ ಕುತೂಹಲಭರಿತವಾಗಿರಬೇಕು. ಆಗ ನಾವು ಪ್ರತಿದಿನ ಹೊಸ ವಿದ್ಯಮಾನಗಳನ್ನು ಗುರುತಿಸಬಲ್ಲೆವು ಎಂದು ತಿಳಿಸಿದರು.  ಎ.ವಿ. ಕಮಲಮ್ಮ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಮಾತನಾಡಿ, ಈ ತಿಂಗಳು ಸಂಭವಿಸುವ ಬಾಹ್ಯಾಕಾಶ ಕೌತುಕಗಳನ್ನು ವೀಕ್ಷಿಸಿ ವರದಿ ತಯಾರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ಕರಾವಿಪ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಸಿದ್ದೇಶ್ ಕತ್ತಲಗೆರೆ, ಬಾಲಭವನದ ಸಂಯೋಜಕಿ ಶಿಲ್ಪಾ, ಎ.ವಿ.ಕೆ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net