

ದಾವಣಗೆರೆ : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಶಿಕ್ಷಕರು ತಮ್ಮ ಪ್ರತಿಭೆ ಮತ್ತು ಜ್ಞಾನವನ್ನು ಸಮರ್ಥವಾಗಿ ವಿನಿಯೋಗಿಸಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಬಹುಭಾಗ ಬೆಳಕನ್ನೇ ಕಾಣದಿದ್ದ ಸಂದರ್ಭದಲ್ಲಿ ದೇಶದ ನಲಂದಾ ಮೊದಲಾದ ಪ್ರಾಚೀನ ವಿಶ್ವವಿದ್ಯಾಲಯಗಳು ಜ್ಞಾನದ ಬೆಳಕನ್ನು ಚೆಲ್ಲಿವೆ. ವಿದೇಶಿಗರನ್ನೂ ಕೂಡ ಕೈಬೀಸಿ ಕರೆದು ಜ್ಞಾನ ಹಂಚಿಕೆ ಮಾಡುವ ಮೂಲಕ ಭಾರತ ಜಗದ್ಗುರು ಎನಿಸಿಕೊಂಡಿದ್ದು ಇಂದಿಗೂ ಮುಂಚೂಣಿಯಲ್ಲಿದೆ. ವಿಶ್ವವಿಖ್ಯಾತ ವಿಜ್ಞಾನಿಗಳು ಇಲ್ಲಿಂದ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.
ನಮ್ಮ ಜನಪದ ಮಹಿಳೆಯರು ವಿವಿಗಳಲ್ಲಿ ಯಾವುದೇ ಪದವಿ ಹಾಗೂ ಪಿಎಚ್.ಡಿ ಪಡೆಯದಿದ್ದರೂ ಜ್ಯೋತಿಯೇ ಆಗು ಜಗಕೆಲ್ಲ ಎಂಬ ಅದ್ಭುತ ಸಂದೇಶ ನೀಡಿದ್ದಾರೆ. ಒಬ್ಬ ತಾಯಿ ಸಮರ್ಥ ಶಿಕ್ಷಕಿಯಾಗಿ ಥಾಮಸ್ ಆಲ್ವಾ ಎಡಿಸನ್ ಅವರಂತಹ ವಿಜ್ಞಾನಿಯನ್ನು ರೂಪಿಸಿದ್ದಾರೆ. ಶಿಕ್ಷಕರು ತಮ್ಮ ಸಾಮರ್ಥ್ಯ ಅರ್ಥೈಸಿಕೊಳ್ಳದಿದ್ದರೆ ವಿಶ್ವದ ಕಡೆಗೆ ಭಾರತ ತಿರುಗಿ ನೋಡುವುದು ಹೇಗೆ? ಎಂದು ಪ್ರಶ್ನಿಸಿದರು.
ಶಿಕ್ಷಕ ವೃತ್ತಿ ಎಂಬುದು ಒಂದು ಸವಾಲಿನಿಂದ ಕೂಡಿದ್ದು, ಶಿಕ್ಷಕರು ತಮ್ಮೊಳಗಿನ ಜ್ಞಾನವನ್ನು ಸಂವಹನ ಮಾಡುವುದು ಬಹಳ ಮುಖ್ಯ. ಶಿಕ್ಷಕರು ಮನಸ್ಸು ಮಾಡಿದರೆ ಯಾವುದೇ ಸಾಧನೆ ಕೈಗೊಳ್ಳಬಹುದಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಸೃಜನಶೀಲವಾಗಿ ವರ್ಗಾಯಿಸಬೇಕು. ಇದರಿಂದ ಮುಂದಿನ ಪ್ರಜೆಗಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಾರ್ಯದರ್ಶಿ ಎಚ್. ಜಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಕೌಶಲ ಕಲಿಸುವ ಜತೆಗೆ ವಿಜ್ಞಾನದ ಕಡೆಗೆ ಕರೆದೊಯ್ಯಬೇಕು. ಸರಿಯಾದ ಮಾರ್ಗದರ್ಶನದೊಂದಿಗೆ ಮಕ್ಕಳನ್ನು ರೂಪಿಸಿದಾಗ ರಾಷ್ಟ್ರವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ ಗೌರವಾಧ್ಯಕ್ಷ ಡಾ.ಜೆ.ಬಿ. ರಾಜ್ ಮಾತನಾಡಿ, ಜೀವಿ ಪರಿಸರ ಹಾಗೂ ಆರೋಗ್ಯಕ್ಕಾಗಿ ಹೊಸ ವಿಚಾರ ಕಂಡುಕೊಳ್ಳಬೇಕು ಹಾಗೂ ಅನ್ವೇಷಣೆ ನಡೆಸಬೇಕು. ಯಾವುದೇ ಕಾರ್ಯ ಕೈಗೊಳ್ಳಲು ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕಾರ್ಯಶಕ್ತಿ ಅವಶ್ಯಕ ಎಂದು ಹೇಳಿದರು.
ವಿಜ್ಞಾನ ಪರಿಷತ್ ಖಜಾಂಚಿ ಅಂಗಡಿ ಸಂಗಪ್ಪ ಪ್ರಾಸ್ತಾವಿಕ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೇಶದಲ್ಲಿ ಪ್ರತಿವರ್ಷ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಸಲಾಗುತ್ತಿದೆ. ಮಕ್ಕಳು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವಂಥ ಯೋಜನೆ ರೂಪಿಸಲು ಶಿಕ್ಷಕರು ನೆರವಾಗಬೇಕು. ಡಿಸೆಂಬರ್‌ನಲ್ಲಿ ಕೊಪ್ಪಳದಲ್ಲಿ ರಾಜ್ಯ ಹಾಗೂ ಜೈಪುರದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಲಿವೆ ಎಂದು ತಿಳಿಸಿದರು.
ಪರಿಷತ್ ಜಿಲ್ಲಾ ಸಂಯೋಜಕ ಕೆ. ಸಿದ್ದೇಶ್, ಸಂಪನ್ಮೂಲ ವ್ಯಕ್ತಿ ಪುಷ್ಪಕುಮಾರ್ ಇದ್ದರು. ವಿದ್ಯಾರ್ಥಿನಿಯರಾದ ತನ್ಮಯಿ ಮತ್ತು ಚಿನ್ಮಯಿ ಪ್ರಾರ್ಥಿಸಿದರು. ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಸ್ವಾಗತಿಸಿದರು.