ಕಣ್ಮುಚ್ಚಿತು ಸ್ವಾತಂತ್ರೃ ಪೂರ್ವದ ಸರ್ಕಾರಿ ಶಾಲೆ

dvg-school-24-1.jpg
Published on

ರಮೇಶ ಜಹಗೀರದಾರ್ ದಾವಣಗೆರೆ

ಒಂದು ಕಾಲದಲ್ಲಿ ನೂರಾರು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದ, ತಾಲೂಕಿನ ತೋಳಹುಣಸೆ ಗ್ರಾಮದ ಸ್ವಾತಂತ್ರೃ ಪೂರ್ವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳೇ ಇಲ್ಲದೆ ಬಂದ್ ಆಗಿದೆ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹ, ಖಾಸಗಿ ವಿದ್ಯಾಸಂಸ್ಥೆಗಳ ಆಕರ್ಷಣೆಯು ಸರ್ಕಾರಿ ಶಾಲೆಗಳನ್ನು ನುಂಗಿ ಹಾಕುತ್ತಿರುವುದಕ್ಕೆ ಇದೊಂದು ತಾಜಾ ನಿದರ್ಶನ.

ಗ್ರಾಮದಲ್ಲಿ 1942 ರಲ್ಲಿ ಆರಂಭವಾದ ಈ ಶಾಲೆಯು ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆಯುತ್ತ ಬಂದಿತ್ತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಈ ವರ್ಷ ಹೊಸದಾಗಿ ಯಾವುದೇ ದಾಖಲಾತಿಯಾಗಿಲ್ಲ. ಇದ್ದ 7 ವಿದ್ಯಾರ್ಥಿಗಳೂ ವರ್ಗಾವಣೆ ಪತ್ರ ಪಡೆದುಕೊಂಡು ಶಾಲೆಗೆ ಗುಡ್‌ಬೈ ಹೇಳಿದ್ದಾರೆ.

ಹಳೆಯ ಕಟ್ಟಡ ಶಿಥಿಲವಾಗಿದ್ದರಿಂದ 10 ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಶಾಲೆಯು ಸ್ಥಳಾಂತರಗೊಂಡಿತು. ಒಂದೂವರೆ ಎಕರೆ ವಿಸ್ತೀರ್ಣದ ಜಾಗದಲ್ಲಿ 6 ತರಗತಿ ಕೊಠಡಿಗಳಿವೆ. ಒಂದು ಅಡುಗೆ ಕೋಣೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಅಷ್ಟೇ ಅಲ್ಲ, ಕುಳಿತು ಪಾಠ ಕೇಳಲು ಸುಸಜ್ಜಿತ ಡೆಸ್ಕ್‌ಗಳು, 2 ಕಂಪ್ಯೂಟರ್ ಇವೆ. 2 ಸಾವಿರ ಪುಸ್ತಕಗಳ ಕಿರು ಗ್ರಂಥಾಲಯ, ಆಟವಾಡಲು ಮೈದಾನ, ಬಯಲು ರಂಗಮಂದಿರವೂ ಇದೆ. ಇಷ್ಟೆಲ್ಲ ಮೂಲಸೌಲಭ್ಯವಿದ್ದರೂ, ಪ್ರಯೋಜನ ಪಡೆಯಲು ವಿದ್ಯಾರ್ಥಿಗಳೇ ಇಲ್ಲದಂತಾಗಿದೆ!

ಕೆಲ ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿರುವುದು ತಿಳಿಯುತ್ತದೆ. 1 ರಿಂದ 7ನೇ ತರಗತಿಯ ವರೆಗೆ 2015 ರಲ್ಲಿ 50-60 ಮಕ್ಕಳು ಓದುತ್ತಿದ್ದರು, 4 ಜನ ಶಿಕ್ಷಕರಿದ್ದರು. 2020-21 ರಲ್ಲಿ ಮಕ್ಕಳ ಸಂಖ್ಯೆ 48ಕ್ಕೆ ಕುಸಿಯಿತು. 2021-22 ರಲ್ಲಿ 43 ಆಯಿತು. 2022-23 ರಲ್ಲಿ 33 ಮಕ್ಕಳಿದ್ದರು. 2023-24 ರಲ್ಲಿ ಕೇವಲ 9 ವಿದ್ಯಾರ್ಥಿಗಳು ಉಳಿದರು. ಕೊನೆಗೆ 7 ಮಕ್ಕಳು ಉಳಿದಿದ್ದರು. ಈ ವರ್ಷ ಆ 7 ಮಕ್ಕಳೂ ಶಾಲೆಯನ್ನು ಬಿಟ್ಟಿದ್ದಾರೆ.

ಸೋಮವಾರ ಕೊನೆಯ ಇಬ್ಬರು ಮಕ್ಕಳ ವರ್ಗಾವಣೆ ಪತ್ರವನ್ನು ನೀಡುವುದರೊಂದಿಗೆ ಶಾಲೆಯ ಬಾಗಿಲು ಮುಚ್ಚಿದಂತಾಗಿದೆ. ಇಬ್ಬರು ಶಿಕ್ಷಕರು ಮಾತ್ರ ಉಳಿದುಕೊಂಡಿದ್ದು ಅವರೂ ಬೇರೆ ಶಾಲೆಯನ್ನು ಹುಡುಕಿಕೊಳ್ಳಬೇಕಿದೆ.

ಮೇ ಕೊನೆಯ ವಾರದಿಂದ ಜೂನ್ ಮೊದಲ ವಾರದ ವರೆಗೆ ವಿಶೇಷ ದಾಖಲಾತಿ ಆಂದೋಲನದಡಿ ಶಿಕ್ಷಕರು ಮನೆ ಮನೆಗೆ ಹೋಗಿ ಪಾಲಕರಿಗೆ ಮನವೊಲಿಸಲು ಮಾಡಿದ ಪ್ರಯತ್ನ ಫಲ ನೀಡಿಲ್ಲ.

...

(ಬಾಕ್ಸ್)

ಇಂಗ್ಲಿಷ್ ಮಾಧ್ಯಮ ವ್ಯಾಮೋಹ

ಸರ್ಕಾರಿ ಶಾಲೆ ಬಂದ್ ಆಗಲು ಅನೇಕ ಕಾರಣಗಳಿವೆ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಬೇಕು ಎನ್ನುವ ವ್ಯಾಮೋಹ ಒಂದು ಪ್ರಮುಖ ಕಾರಣವಾಗಿದೆ.

ಗ್ರಾಮವು ದಾವಣಗೆರೆ ನಗರಕ್ಕೆ ಹತ್ತಿರ ಇರುವುದರಿಂದ ಬಹಳಷ್ಟು ಪಾಲಕರು ಮಕ್ಕಳನ್ನು ವಿವಿಧ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಶಾಲಾ ಬಸ್‌ಗಳ ವ್ಯವಸ್ಥೆಯೂ ಇದೆ. ಗ್ರಾಮದ ಈ ಸರ್ಕಾರಿ ಶಾಲೆಗೆ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಖಾಸಗಿ ಶಾಲೆಯಿದೆ.

ಈ ವರ್ಷ ಶಾಲೆ ಆರಂಭವಾದಾಗ ಇದ್ದ 7 ಮಕ್ಕಳಲ್ಲಿ ಐವರು ದೂರ ಸರಿದರು. ಉಳಿದಿದ್ದ ಕೇವಲ ಇಬ್ಬರು ಮಕ್ಕಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ಶಾಲೆಯಲ್ಲಿ ಗೆಳೆಯರೇ ಇಲ್ಲದಿದ್ದರೆ ಮಕ್ಕಳು ಬರುವುದಾದರೂ ಹೇಗೆ?.

ತೋಳಹುಣಸೆಯ ಯಲ್ಲಮ್ಮ ನಗರದಲ್ಲಿ ಮತ್ತೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆಯಾದರೂ ಮಕ್ಕಳು ಫ್ಲೈ ಓವರ್ ಹತ್ತಿ, ಇಳಿದು ಹೋಗಬೇಕಾಗುತ್ತದೆ. ಆದ್ದರಿಂದ ಪಾಲಕರು ಅಲ್ಲಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

...

(ಬಾಕ್ಸ್)

4 ವರ್ಷಗಳಲ್ಲಿ 8 ಕ್ಲೋಸ್!

ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ 8 ಸರ್ಕಾರಿ ಶಾಲೆಗಳು ಬಂದ್ ಆಗಿವೆ. ತೋಳಹುಣಸೆ ಶಾಲೆಯೂ ಆ ಪಟ್ಟಿಗೆ ಸೇರ್ಪಡೆಯಾಗಿದೆ.

2020-21 ರಲ್ಲಿ ದಾವಣಗೆರೆ (ಉತ್ತರ) ವ್ಯಾಪ್ತಿಯ ಆನಗೋಡು ಜಿಎಲ್‌ಪಿಎಸ್ (ಉರ್ದು) ಶಾಲೆ ಬಾಗಿಲು ಹಾಕಿತು. 2021-22 ರಲ್ಲಿ ಚನ್ನಗಿರಿ ತಾಲೂಕು ಗಾಳಿಹಳ್ಳಿ (ಜಿಎಲ್‌ಪಿಎಸ್) ಬಂದ್ ಆಯಿತು.

2022-23 ರಲ್ಲಿ 4 ಶಾಲೆಗಳು ಕಣ್ಮುಚ್ಚಿದವು. ದಾವಣಗೆರೆ (ಉತ್ತರ) ವ್ಯಾಪ್ತಿಯ ಲಕ್ಕಮುತ್ತೇನಹಳ್ಳಿ, ದಾವಣಗೆರೆ (ದಕ್ಷಿಣ)ದ ಕೋಡಿಹಳ್ಳಿ ಕ್ಯಾಂಪ್, ಪಿಜೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೋಗುಂಡಿ), ನ್ಯಾಮತಿ (ಎಕೆಸಿ)ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ) ಬಾಗಿಲು ಮುಚ್ಚಿದವು.

2023-24 ರಲ್ಲಿ ಚನ್ನಗಿರಿ ತಾಲೂಕು ಕೊಡಗಿಕೆರೆ ಕ್ಯಾಂಪ್ ಮತ್ತು ನಾಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಬಂದ್ ಆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net