

ದಾವಣಗೆರೆ : ಶಾಲೆಯ ಆವರಣಗಳು ಅಲಂಕಾರದಿಂದ ಕಳೆಗಟ್ಟಿದ್ದವು. ತಳಿರು, ತೋರಣ, ರಂಗೋಲಿಯ ಚಿತ್ತಾರ ಗಮನ ಸೆಳೆದವು. ಬೇಸಿಗೆ ರಜೆ ಮುಗಿಸಿ ಬಂದ ಮಕ್ಕಳಿಗೆ ಸಂಭ್ರಮದ ಸ್ವಾಗತ ಸಿಕ್ಕಿತು. ಪಠ್ಯಪುಸ್ತಕ, ಸಮವಸ್ತ್ರದ ಜತೆಗೆ ವಿದ್ಯಾರ್ಥಿಗಳು ಸಿಹಿಯೂಟ ಸವಿದರು.
ಶಾಲಾ ಪ್ರಾರಂಭೋತ್ಸವ ಅಂಗವಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ನಗರದ ನಿಟ್ಟುವಳ್ಳಿಯ ಪಿಎಂ ಶ್ರೀ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿ, ಹೂವು ಮತ್ತು ಸಿಹಿ ನೀಡುವ ಮೂಲಕ ಡಿಡಿಪಿಐ ಜಿ. ಕೊಟ್ರೇಶ್ ಉದ್ಘಾಟಿಸಿದರು. ದಾನಿಯೊಬ್ಬರು ಮಕ್ಕಳಿಗೆ ಲಾಡು ನೀಡುವ ವ್ಯವಸ್ಥೆ ಮಾಡಿದ್ದರು.
ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಜಯಪ್ಪ, ಅಜಯ್ ನಾರಾಯಣ್, ಸೇವಾದಳ ಸಂಘಟಕದ ಪಕ್ಕೀರ್ ಗೌಡ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ವಿಷಯ ಪರಿವೀಕ್ಷಕರು, ಎಸ್‌ಡಿಎಂಸಿಯವರು, ಪಾಲಕರು, ಶಾಲಾ ಸಿಬ್ಬಂದಿ ಇದ್ದರು.
ಹರಿಹರ ತಾಲೂಕು ಎಕ್ಕೆಗುಂದಿ ಶಾಲೆಯಲ್ಲಿ ಹೋಳಿಗೆ ಊಟ ತಯಾರಿಸಲಾಗಿತ್ತು. ಮತ್ತೆ ಕೆಲವು ಶಾಲೆಗಳಲ್ಲಿ ಪಾಯಸದ ಸ್ವಾದವಿತ್ತು.ಮಲೇಬೆನ್ನೂರಿನಲ್ಲಿ ಚಾಕಲೇಟನ್ನು ಮಕ್ಕಳ ಕೈಗಿಡಲಾಯಿತು. ತಳಿರು, ತೋರಣ, ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ಹೊನ್ನಾಳಿ ತಾಲೂಕು ಅರಕೆರೆ ಶಾಲೆಯಲ್ಲಿ ಮಕ್ಕಳಿಗೆ ಕಂಕಣ ಕಟ್ಟಿ ಶಿಕ್ಷಣ ಕಲಿಕೆಯಲ್ಲಿ ಕಂಕಣಬದ್ಧವಾಗಿರುವ ಸಂಕಲ್ಪ ಮಾಡಿಸಲಾಯಿತು. ಸಿಹಿ ಮತ್ತು ಗುಲಾಬಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.