

ದಾವಣಗೆರೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ, ವ್ಯಾಪಾರ, ರಾಜಕೀಯ ಪ್ರತಿಯೊಂದರಲ್ಲೂ ಸ್ಪರ್ಧೆ ಇದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ಪಿ.ಜೆ. ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾದ ಶಾಲಾ ಮಂತ್ರಿಮಂಡಲ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಸಮಾರಂಭದಲ್ಲಿ ಮಾತನಾಡಿದರು. ಆಡಳಿತ ಪಕ್ಷದ ವೈಖರಿ, ವಿಪಕ್ಷದ ತಪ್ಪುಗಳನ್ನು ತಿದ್ದುವ ಕಾರ್ಯದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು ಎಂದರು. ಎಸ್‌ಕೆಪಿ ಡೈಮಂಡ್ ಜುಬ್ಲಿ ವಿದ್ಯಾಪೀಠದ ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್ ಮಾತನಾಡಿ, ಕೇವಲ ಅಂಕಗಳಿಗೆ ಮಹತ್ವ ಕೊಡಬಾರದು. ಕೌಶಲಗಳನ್ನು ಬೆಳೆಸಿಕೊಳ್ಳಬೇಕು, ಅದರಿಂದ ಉದ್ಯೋಗ ಅವಕಾಶಗಳು ಸಿಗುತ್ತವೆ. ಸ್ವ-ಉದ್ಯೋಗ ಮಾಡಬಹುದು, ನೀವೇ ಉದ್ಯಮಿಗಳಾಗಬೇಕು ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್. ಸುಜಾತ ಕೃಷ್ಣ, ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಾದ ಶ್ರೇಯಸ್ ಕುಮಾರ್ ಸುರ್ವೆ, ಬಿ. ಖುಷಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್, ಉಪ ಪ್ರಾಚಾರ್ಯೆ ಜಿ.ಎಸ್. ಶಶಿರೇಖಾ, ಸಹ ಶಿಕ್ಷಕಿಯರಾದ ಹೇಮಲತಾ, ರೋಹಿಣಿ ಎಂ, ಶ್ರೀದೇವಿ ಬಿ. ಇದ್ದರು.