ಶಿಕ್ಷಣ ಅಸಮಾನತೆ ಹೋಗಲಾಡಿಸುವ ಗುರಿ

dvg-vinay-kumar_20250705000936878.jpg
Published on

ದಾವಣಗೆರೆ :  ಶಿಕ್ಷಣದಲ್ಲಿನ ಅಸಮಾನತೆ ಹೋಗಲಾಡಿಸುವುದೇ ನನ್ನ ಜೀವನದ ಗುರಿ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.  ನಗರದ ನಿಟುವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ, ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೋಟ್ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಮಕ್ಕಳಿಗೆ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶಿಕ್ಷಣ ಗುಣಮಟ್ಟದಲ್ಲಿ ವ್ಯತ್ಯಾಸ ಇರುತ್ತದೆ. ರಾಜಕಾರಣದಲ್ಲಿರುವ ಸಮಾನತೆಯಂತೆ ಶಿಕ್ಷಣದಲ್ಲಿ ಏಕೆ ಇಲ್ಲ. ಅಂಬಾನಿ ಮಕ್ಕಳಿಗೆ ಸಿಗುವ ಶಿಕ್ಷಣ ನಿಮಗೂ ಸಿಗಬೇಕು ಎಂದು ಪ್ರತಿಪಾದಿಸಿದರು.  ಜೀವನ ಶೈಲಿ ಬದಲಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ ಪಡೆಯಬೇಕು. ಒಳ್ಳೆಯ ವ್ಯಕ್ತಿತ್ವ, ಆಕರ್ಷಕ ಗುಣಗಳನ್ನು ಹೊಂದಬೇಕು. ಸ್ವಯಂ ಪ್ರೇರಿತವಾಗಿ ಪಠ್ಯ, ಪಠ್ಯೇತರ ಸಾಹಿತ್ಯ ಇನ್ನಿತರ ಪುಸ್ತಕಗಳನ್ನು ಓದಿ ಜ್ಞಾನ ಪಡೆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.  ಈ ಶಾಲೆಯ ಐವರು ವಿದ್ಯಾರ್ಥಿಗಳು ಮುಂದೆ ಬಂದರೆ ಇನ್‌ಸೈಟ್ಸ್ ಸಂಸ್ಥೆಯಿಂದ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುತ್ತೇನೆ. ಲಕ್ಷಾಂತರ ರೂಪಾಯಿ ಖರ್ಚಾದರೂ ಪರವಾಗಿಲ್ಲ. ನಾಲ್ಕೈದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಇದ್ದರೂ ಉಚಿತವಾಗಿ ತರಬೇತಿ ನೀಡುತ್ತೇನೆ ಎಂದರು.  ಮುಖ್ಯ ಶಿಕ್ಷಕರಾದ ಎಂ. ಸುರೇಶ್, ಟಿ.ಎಸ್. ಗುರುಮೂರ್ತಿ, ಗುರುರಾಜ್, ಡಾ. ಬಿ. ಸ್ವಪ್ನಾ, ಜಿ. ಪಿ. ಸಚಿನ್ ಕುಮಾರ್, ವೈದ್ಯಾಧಿಕಾರಿ ಶಿವರುದ್ರಪ್ಪ, ಉಚ್ಚಂಗಪ್ಪ, ವಿನಯ್ ಕುಮಾರ್, ಭೀಮೇಶ್ ಕುಮಾರ್, ಬಿ.ಎಂ. ಸುರೇಶ್, ಟಿ.ಎಸ್. ಸ್ವಾಮಿ, ಎಂ. ಸುರೇಶ್ ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಕೆ. ಟಿ. ಜಯಪ್ಪ ಸ್ವಾಗತಿಸಿದರು. ಜಿ. ಪಿ. ಸಚಿನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net