ಶಾಲೆಗೆ ಮಕ್ಕಳ ಗೈರು ನಿರ್ಲಕ್ಷೃ ಬೇಡ

dvg-children.jpg
Published on

ದಾವಣಗೆರೆ : ಮಕ್ಕಳು ಶಾಲೆಗೆ ಗೈರಾಗುವುದನ್ನು ಸಣ್ಣ ವಿಚಾರವೆಂದು ಶಿಕ್ಷಕರು ನಿರ್ಲಕ್ಷೃ ಮಾಡಬಾರದು ಎಂದು ಮಕ್ಕಳ ಹಕ್ಕು ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳ ಹೇಳಿದರು.  ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಭ್ರೂಣಹತ್ಯೆ, ವಲಸೆ ಕುಟುಂಬದಲ್ಲಿನ ಮಕ್ಕಳ ರಕ್ಷಣೆ, ಮಕ್ಕಳ ಸಾಗಣೆ ಮತ್ತು ಮಾರಾಟ ನಿಷೇಧ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.  ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. 8 ದಿನಗಳಿಂದ ಮಗು ಹಾಜರಾಗದೇ ಇದ್ದರೆ ಶಾಲೆಯಿಂದ ಹೊರಗುಳಿದಿದೆ ಎಂದೇ ಪರಿಗಣಿಸಬೇಕು. ಮಗು ಕಳ್ಳಸಾಗಣೆ ಆಗಿರುವ ಅಥವಾ ಬಾಲ್ಯ ವಿವಾಹ ನಡೆದಿರುವ ಸಾಧ್ಯತೆ ಇರಬಹುದು. ಶಿಕ್ಷಕರ ಸಣ್ಣ ಎಚ್ಚರಿಕೆ ಮಕ್ಕಳನ್ನು ಸಂರಕ್ಷಣೆ ಮಾಡಲಿದೆ ಎಂದು ತಿಳಿಸಿದರು.  ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಬಿಸಿಯೂಟ ಸಿಗಬೇಕು. ನ್ಯಾಪ್‌ಕಿನ್ ಕೂಡ ದೊರಕಬೇಕು. ಹಾಸ್ಟೆಲ್‌ಗಳಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾದರೆ ವಾರ್ಡನ್‌ಗಳೇ ಹೊಣೆಯಾಗುತ್ತಾರೆ. ಸಿ.ಸಿ. ಟಿವಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಮಕ್ಕಳ ಹಾಜರಾತಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.  ಮಕ್ಕಳು ನಮ್ಮ ಸಂಪತ್ತಾಗಿದ್ದು ಅವರ ಮೇಲಿನ ದೌರ್ಜನ್ಯ ತಡೆಗಟ್ಟಲು, ಮಕ್ಕಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ನಡೆದಿದ್ದಲ್ಲಿ ಅಥವಾ ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಹಾಗೂ 112 ಕರೆ ಮಾಡಬೇಕು. ತಕ್ಷಣ ಮಕ್ಕಳ ಸಂರಕ್ಷಣೆ ಮಾಡಲು ಕಾರ್ಯ ಪ್ರವೃತ್ತರಾಗುವುದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯ ಎಂದರು.  ಮಕ್ಕಳು ಪ್ರತಿ ದಿನ ಶಾಲೆಗೆ, ಕಾಲೇಜಿಗೆ ಹೋಗಲು ಬಸ್ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಹಾಸ್ಟೆಲ್ಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡುವಂತೆ ತಿಳಿಸಿದರು.  ಮಕ್ಕಳಿಗೆ ಸಂವಿಧಾನಬದ್ಧ ಹಕ್ಕುಗಳನ್ನು ಕಲ್ಪಿಸಲಾಗಿದೆ. ಅವುಗಳಿಗೆ ಧಕ್ಕೆಯುಂಟಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಸಮಾಜ ಹೊಣೆಗೇಡಿತನ ಪ್ರದರ್ಶನ ಮಾಡುತ್ತಿರುವುದು ಹಲವು ಬಾರಿ ನಿರೂಪಿತವಾಗಿದೆ. ತಪ್ಪು ದಾರಿ ತುಳಿದ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಅಭಿಪ್ರಾಯಪಟ್ಟರು.  ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲು ಮಕ್ಕಳನ್ನು ಬಂಧಿಸಿದ ನಿದರ್ಶನಗಳಿವೆ. ಉನ್ನತ ಶಿಕ್ಷಣದಲ್ಲಿ ಸೀಟ್ ಬ್ಲಾಕಿಂಗ್‌ಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ತಪ್ಪುಗಳಿಗೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಮಕ್ಕಳು ನಿರ್ಭಯವಾಗಿ ಪೋಕ್ಸೋ, ಬಾಲ್ಯ ವಿವಾಹ ಕಾಯ್ದೆ, ಜೆಜೆ ಕಾಯ್ದೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಜವಾಬ್ದಾರಿಗಳು, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿಯ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಮಕ್ಕಳು ಉತ್ಸಾಹದಿಂದ ಅಹವಾಲು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್‌ಕುಮಾರ್ ಎಂ.ಸಂತೋಷ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜ ನಾಯ್ಕ, ಡಿಸಿಪಿಐ ಕೆ.ಬಿ. ಕೊಟ್ರೇಶ್, ಸಿಐಡಿ ಘಟಕದ ಪೊಲೀಸ್ ತರಬೇತುದಾರ ಸಿ.ಜೆ.ರೋಹಿತ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ಜಿಲ್ಲಾ ಅಂಗವಿಕಲರ ಸಬಲೀಕರಣ ಅಧಿಕಾರಿ ಕೆ.ಕೆ.ಪ್ರಕಾಶ್ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net