

ದಾವಣಗೆರೆ : ಅದೊಂದು ಪುಟ್ಟ ಶಾಲೆ. ಅಲ್ಲಿನ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿತ್ತು. ಅದಕ್ಕೆ ಕಾರಣರಾದವರು ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್. ತಾಲೂಕಿನ ಯರವನಾಗತಿಹಳ್ಳಿ ಕ್ಯಾಂಪ್ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಸಂಸದರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ ಸೇರಿ ವಿವಿಧ ಪುಸ್ತಕ ವಿತರಿಸಿ ಚಿಣ್ಣರಲ್ಲಿ ಸಂತಸ ಮೂಡಿಸಿದರು. ಲೋಕಸಭಾ ಸದಸ್ಯರಾಗಿ ಚುನಾಯಿತರಾದಾಗ ತಮ್ಮನ್ನು ಅಭಿನಂದಿಸಲು ಬರುವ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂವಿನಹಾರ, ಶಾಲು, ಹಣ್ಣಿನಬುಟ್ಟಿ, ಪೇಟ ಬದಲು ಪುಸ್ತಕ, ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ ನೀಡಲು ಮನವಿ ಮಾಡಿದ್ದರು. ಅದರಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮಗೆ ಬಂದಂತಹ ನೋಟ್ ಪುಸ್ತಕಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಮೂಲಕ ಹೊಸ ವ್ಯವಸ್ಥೆ ಪ್ರಾರಂಭಿಸಿದ್ದಾರೆ. ಸರ್ಕಾರಿ ಶಾಲೆಗಳು ಉಳಿಯಬೇಕು ಹಾಗೂ ಬೆಳೆಯಬೇಕು. ಇದಕ್ಕಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯಲ್ಲಿರುವವರು ಕೊಡುಗೆ ನೀಡಬೇಕು. ಸರ್ಕಾರಿ ಶಾಲೆಗಳ ಉಳಿವು ಹಾಗೂ ಅಭಿವೃದ್ಧಿಗೆ ಸದಾ ಸಿದ್ಧ ಎಂದು ತಿಳಿಸಿದರು.