

ದಾವಣಗೆರೆ : ನಗರ ಹೊರ ವಲಯದ ಕರೂರು ಗ್ರಾಮದ (ದಾವಣಗೆರೆ ಉತ್ತರ ವಲಯ) ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಥಿಲಗೊಂಡಿದ್ದ ಕೊಠಡಿಯೊಂದರ ಮೇಲ್ಚಾವಣಿ ಗುರುವಾರ ಮಳೆಯಿಂದಾಗಿ ಕುಸಿದಿದ್ದು ಯಾವುದೇ ಅಪಾಯವಾಗಿಲ್ಲ. ಶಿಥಿಲವಾಗಿದ್ದ ಕಾರಣ ಆ ಕೊಠಡಿಯನ್ನು 2 ವರ್ಷಗಳಿಂದ ಬಳಸದೆ ಬೀಗ ಹಾಕಲಾಗಿತ್ತು. ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ಚಾವಣಿಯ ಹೆಂಚುಗಳು ಕುಸಿದು ಬಿದ್ದಿವೆ. ಘಟನೆ ನಡೆದಾಗ ಅದೃಷ್ಟವಶಾತ್ ಅಲ್ಲಿ ಯಾರೂ ಇರಲಿಲ್ಲ. ಗ್ರಾಮದಲ್ಲಿ ಉರ್ದು ಹಾಗೂ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಒಂದೇ ಜಾಗದಲ್ಲಿವೆ. 1935 ರಷ್ಟು ಹಳೆಯದಾದ ಈ ಶಾಲೆಯ ಕಟ್ಟಡ ಶಿಥಿಲವಾಗಿದೆ. ಅದರಲ್ಲೂ ಒಂದು ಕೊಠಡಿ ಬಹಳ ಶಿಥಿಲವಾಗಿದ್ದರಿಂದ 2 ವರ್ಷಗಳಿಂದ ಅದಕ್ಕೆ ಬೀಗ ಹಾಕಲಾಗಿತ್ತು. ಮಳೆಯಿಂದಾಗಿ ಆ ಕೊಠಡಿಯ ಚಾವಣಿ ಕುಸಿದು ಬಿದ್ದಿದ್ದು ಹೆಂಚುಗಳು ಪುಡಿಯಾಗಿವೆ. ಚಾವಣಿ ಕುಸಿದಿರುವ ಕೊಠಡಿಯ ಅಕ್ಕಪಕ್ಕದ ಕೋಣೆಗಳಲ್ಲಿ ತರಗತಿಗಳು ನಡೆಯುತ್ತಿವೆ. ಉರ್ದು ಮಾಧ್ಯಮದಲ್ಲಿ 11, ಕನ್ನಡ ಮಾಧ್ಯಮದಲ್ಲಿ 40 ಮಕ್ಕಳು ಇದ್ದಾರೆ. ಘಟನಾ ಸ್ಥಳಕ್ಕೆ ಡಿಡಿಪಿಐ ಕೊಟ್ರೇಶ್ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದ್ದರು. ಗ್ರಾಮಸ್ಥರೊಂದಿಗೆ ಚರ್ಚಿಸಿ ಶುಕ್ರವಾರದಿಂದ ಊರಿನ ಸಮುದಾಯ ಭವನದಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ದಾನಿಗಳೊಬ್ಬರು ಶಾಲಾ ಕಟ್ಟಡಕ್ಕಾಗಿ ನಿವೇಶನ ನೀಡಿದ್ದರು. ಸ್ವಲ್ಪ ವಿವಾದ ಇರುವುದರಿಂದ ಶಾಲೆಗೆ ಹೊಸ ಕಟ್ಟಡ ಕಟ್ಟಿಸಲು ಸಾಧ್ಯವಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಡಿ 4 ಕೊಠಡಿಗಳು ಮಂಜೂರಾದರೂ, ನಿವೇಶನ ವಿವಾದದ ಕಾರಣಕ್ಕೆ ಹಣ ವಾಪಸಾಗಿತ್ತು. ಈಗ ಶಾಸಕರ ಅನುದಾನದಡಿ 27 ಲಕ್ಷ ರೂ. ಬಿಡುಗಡೆಯಾಗಿದ್ದರೂ ಕಟ್ಟಡ ಕಟ್ಟಲು ಆಗಿರಲಿಲ್ಲ. ... (ಬಾಕ್ಸ್) ವರದಿ ತರಿಸಿಕೊಂಡ ಸಂಸದೆ ಸಂಸತ್ ಅಧಿವೇಶನ ಹಿನ್ನೆಲೆ ದೆಹಲಿಯಲ್ಲಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಲೆಯ ಮೇಲ್ಚಾವಣಿ ಕುಸಿದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡರು. ಶಾಲೆಯ ಕಟ್ಟಡವು ಶಿಥಿಲಗೊಂಡಿದ್ದು ಕಳೆದ ಎರಡು ವರ್ಷಗಳಿಂದ ಆ ಕೊಠಡಿಯಲ್ಲಿ ತರಗತಿ ನಡೆಸುತ್ತಿರಲಿಲ್ಲ ಎಂದು, ಸ್ಥಳಕ್ಕೆ ಭೇಟಿ ನೀಡಿದ್ದ ಡಿಡಿಪಿಐ ಕೊಟ್ರೇಶ್ ಅವರು ವಿವರ ಒದಗಿಸಿದರು.