

ದಾವಣಗೆರೆ : ಶೌಚಗುಂಡಿ ಹಾಗೂ ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರ (ಮ್ಯಾನ್ಯುಯಲ್ ಸ್ಕ್ಯಾವೆಂಜರ್) ಪುನರ್ವಸತಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸಂಚಾಲಕ ಕೆ.ಬಿ. ಓಬಳೇಶ್ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 405 ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿದೆ. ಶಿಕ್ಷಣ ವಂಚಿತರಾಗಿರುವ ಇವರ ಪುನರ್ವಸತಿಗೆ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ವಸತಿ ಸೌಲಭ್ಯ, ಪರ್ಯಾಯ ಉದ್ಯೋಗ ಕಲ್ಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕ ಮಾಡಿಕೊಳ್ಳುವಂತೆ ಸಲ್ಲಿಸಿದ ಕೋರಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರ್ಯಾಯ ಉದ್ಯೋಗ ಸಿಗದೇ ಅಸಹಾಯಕರಾದ ಅನೇಕರು ಇದೇ ವೃತ್ತಿಗೆ ಮರಳುವ ಅಪಾಯವಿದೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಮಂಜೂರು ಮಾಡಲು ಅವಕಾಶವಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 7,000ಕ್ಕೂ ಅಧಿಕ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಇದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗದೇ ತೊಳಲಾಡುತ್ತಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೌಲಭ್ಯ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗುರುತಿಸುವಿಕೆಯಲ್ಲಿ ಲೋಪಗಳು ಉಂಟಾಗಿವೆ. ಹಲವರನ್ನು ಪ್ರಜ್ಞಾಪೂರ್ವಕವಾಗಿ ಇದರಿಂದ ಹೊರಗೆ ಇಡಲಾಗಿದೆ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಮುಖಂಡ ಸಿದ್ದಾರ್ಥ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಸಂಚಾಲಕ ಹುಚ್ಚಂಗಪ್ಪ, ಮುಖಂಡರಾದ ಎನ್.ವಾಸುದೇವ, ಮಂಜುಳಾ, ಜ್ಯೋತಿ ಇದ್ದರು.
...