

ದಾವಣಗೆರೆ : ಜಿಲ್ಲೆಯಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ ಮನೆಮಾಡಿದೆ. ಸಾರ್ವಜನಿಕರು ಸೋಮವಾರ ಹಬ್ಬದ ಪರಿಕರಗಳ ಖರೀದಿಯಲ್ಲಿ ತೊಡಗಿದ್ದರು. ನಗರದ ಪ್ರವಾಸಿ ಮಂದಿರ ರಸ್ತೆ, ಗಡಿಯಾರ ಕಂಬ, ಶಾಮನೂರು ರಸ್ತೆ ಇನ್ನಿತರ ಕಡೆಗಳಲ್ಲಿ ಹೂವು, ಹಣ್ಣು, ಕಬ್ಬು ಇನ್ನಿತರ ವಸ್ತುಗಳ ವ್ಯಾಪಾರ ನಡೆಯಿತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸಹಜವಾಗಿಯೇ ದರಗಳು ಜಾಸ್ತಿ ಇದ್ದವು. ಕಾಕಡಾ ಮಲ್ಲಿಗೆ, ಸೇವಂತಿಗೆ, ಕನಕಾಂಬರ ಇನ್ನಿತರ ಹೂವುಗಳು, ಬಣ್ಣ ಬಣ್ಣದ ಬಿಡಿ ಹೂವುಗಳು, ತುಳಸಿ, ಬಿಲ್ವಪತ್ರೆ, ವೀಳ್ಯದೆಲೆ, ವಿವಿಧ ಬಗೆಯ ಹಣ್ಣುಗಳು, ಅಚ್ಚು ಬೆಲ್ಲ, ಸಕ್ಕರೆ ಅಚ್ಚು ಮಾರುಕಟ್ಟೆಯಲ್ಲಿ ಕಂಡುಬಂದವು. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ... * ಮಾಗನೂರು ಬಸಪ್ಪ ಶಾಲೆ ನಗರದ ಮಾಗನೂರು ಬಸಪ್ಪ ಶಾಲಾ ಸಮುಚ್ಚಯದಲ್ಲಿ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿತ್ತು. ಮಕ್ಕಳು ಹಾಗೂ ಶಿಕ್ಷಕರು ಸಾಂಪ್ರದಾಯಿಕ ಶೈಲಿಯಲ್ಲಿ ಸುಗ್ಗಿ ಹಬ್ಬವನ್ನು ಆಚರಿಸಿದರು. ಶಾಲೆಯ ಆವರಣದಲ್ಲಿ ಗ್ರಾಮೀಣ ಪರಿಸರವನ್ನು ಸೃಷ್ಟಿಸಲಾಗಿತ್ತು. ಭತ್ತದ ರಾಶಿಯ ಮೇಲೆ ಕುಂಭಗಳನ್ನಿಟ್ಟು ಹೂವು ಮತ್ತು ಎಲೆಗಳಿಂದ ಸಿಂಗರಿಸಲಾಗಿತ್ತು. ಧಾನ್ಯಗಳ ರಂಗೋಲಿಯ ಚಿತ್ತಾರವಿತ್ತು. ಹಳ್ಳಿಯ ಗುಡಿಸಲು, ಅದರಲ್ಲಿ ಒಲೆ, ಹೆಂಚು, ಬೀಸುವ ಕಲ್ಲು, ಒರಳು ಇನ್ನಿತರ ದಿನಬಳಕೆಯ ವಸ್ತುಗಳನ್ನು ಇಡಲಾಗಿತ್ತು. ಗ್ರಾಮೀಣ ಜನರ ರೀತಿಯಲ್ಲೇ ಮಕ್ಕಳು ಧಾನ್ಯಗಳನ್ನು ಕುಟ್ಟುವುದು, ಕೇರುವುದು ಮಾಡಿದರು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ಎತ್ತಿನ ಬಂಡಿ, ಹುಲ್ಲು, ಕಬ್ಬು ಕಂಡುಬಂದವು. ಬಾವಿಯ ಮಾದರಿಯನ್ನು ಮಾಡಲಾಗಿತ್ತು. ಶಾಲೆಯ ಮಕ್ಕಳು ಸಂಕ್ರಾಂತಿ ಸಂತೆಯನ್ನು ಮಾಡಿದರು. ಅವರೆಕಾಳು, ಗೆಣಸು, ಕಡಲೆ, ಎಳ್ಳು, ಬಗೆ ಬಗೆಯ ತರಕಾರಿ, ಹೂವುಗಳನ್ನು ಇಡಲಾಗಿತ್ತು. ಪ್ರತಿ ವರ್ಷವೂ ಶಾಲೆಯಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡುತ್ತೇವೆ. ಈ ಬಾರಿಯೂ ವಿಶೇಷವಾಗಿ ವ್ಯವಸ್ತೆ ಮಾಡಲಾಗಿತ್ತು. ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಸಂಭ್ರಮಿಸಿದರು ಎಂದು ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾ ತಿಳಿಸಿದರು. ಶಾಲೆಯ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ಶಾಲೆಯ ಆಡಳಿತಾಧಿಕಾರಿ, ಶಿಕ್ಷಕರು ಇದ್ದರು.