ಸಾಣೇಹಳ್ಳಿಯಲ್ಲಿ 24 ರಂದು ಶ್ರದ್ಧಾಂಜಲಿ ಕಾರ್ಯಕ್ರಮ

dvg-sanehalli.jpg
Published on

ದಾವಣಗೆರೆ :  ಸೆ. 24 ರಂದು ನಡೆಯುವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.  ವಿಶಾಲವಾದ ಸಭಾ ವೇದಿಕೆ ಮತ್ತು ಮಹಾಮಂಟಪ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ‘ಅಲ್ಲಮಪ್ರಭು ಮಂಟಪ’ದ ಮುಖ್ಯ ದ್ವಾರವನ್ನು ಒಳಗೊಂಡಂತೆ ‘ವಿಶ್ವಬಂಧು ಮರುಳಸಿದ್ಧ’ ವೇದಿಕೆಯು 40*60 ಅಡಿ ವಿಸ್ತೀರ್ಣ ಹೊಂದಿದೆ. ಎರಡೂ ಬದಿಯಲ್ಲಿ ಗ್ರೀನ್ ರೂಮ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.  ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು 180*200 ಅಡಿಯ ವಿಶಾಲ ಮಹಾ ಮಂಟಪವನ್ನು ನಿರ್ಮಿಸಲಾಗಿದೆ. 8 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಭಾ ಕಾರ್ಯಕ್ರಮವನ್ನು ವೀಕ್ಷಿಸಲು 5 ಕಡೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ  ಮಾಡಲಾಗಿದೆ.  ಸಭಾ ಮಂಟಪದಿಂದ ಸ್ವಲ್ಪ ದೂರದಲ್ಲಿ ‘ಶ್ರೀ ಗುರುಪಾದೇಶ್ವರ ದಾಸೋಹ ಮಂಟಪ’ ನಿರ್ಮಿಸಲಾಗಿದೆ. ಬಫೆ ಪದ್ಧತಿಯಲ್ಲಿ ಪ್ರಸಾದ ಸ್ವೀಕರಿಸಲು ಕೌಂಟರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 15 ರಿಂದ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ.  ಸೆ. 24ರ ಬೆಳಗ್ಗೆ 8 ಗಂಟೆಗೆ ‘ಶಿವ’ ಧ್ವಜಾರೋಹಣ ಮತ್ತು ‘ಶಿವ’ ಮಂತ್ರ ಲೇಖನ, ಚಿಂತನೆ ಹಾಗೂ ಸಾಣೇಹಳ್ಳಿ ಪ್ರಮುಖ ಬೀದಿಗಳಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ನಡೆಯಲಿರುವ ಶ್ರದ್ಧಾಂಜಲಿ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿ, ಕಲಾವಿದರು ಭಾಗವಹಿಸುವರು.  ಈ ಹಿನ್ನೆಲೆಯಲ್ಲಿ ಪಂಡಿತಾರಾಧ್ಯ ಶ್ರೀಗಳು ಹಾಗೂ ಸಮಾಜದ ಮುಖಂಡರಾದ ಅಣಬೇರು ರಾಜಣ್ಣ, ಎಸ್. ರುದ್ರೇಗೌಡ್ರು, ಓಂಕಾರಪ್ಪ, ಬೆನಕಪ್ಪ, ಶಿವಶರಣಪ್ಪ, ಮರಿಯಪ್ಪ, ಶ್ರೀನಿವಾಸ, ಸಂತೋಷ, ಶಿವಮೂರ್ತಯ್ಯ, ನಾಗರಾಜ್, ಬಸವಲಿಂಗಪ್ಪ, ಮೋಹನ್, ಪ್ರಕಾಶ ಮತ್ತಿತರರು ವೇದಿಕೆ ಹಾಗೂ ಊಟದ ವ್ಯವಸ್ಥೆಯನ್ನು ಸೋಮವಾರ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net