ಯುವಜನರಿಗೆ ವೈಚಾರಿಕ ದೃಷ್ಟಿಕೋನ ಅಗತ್ಯ

dvg-sahitya-samvada.jpg
Published on

ದಾವಣಗೆರೆ :  ಹಳೆಯ ನಂಬಿಕೆಗಳನ್ನು ವೈಜ್ಞಾನಿಕ, ತಾರ್ಕಿಕ ನೆಲೆಯಲ್ಲಿ ತೂಗಿ, ಪ್ರಯೋಗಕ್ಕೆ ಒಳಪಡಿಸಿ ತೀರ್ಮಾನಕ್ಕೆ ಬರಬೇಕು. ಯುವಜನರು ಇಂಥ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಚಿಂತಕ ಡಾ. ಜಿ. ರಾಮಕೃಷ್ಣ ಹೇಳಿದರು.  ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ, ಪ್ರೊ. ಬಿ.ವಿ. ವೀರಭದ್ರಪ್ಪ ಅವರ ವೈಚಾರಿಕ ಸಾಹಿತ್ಯ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಯಾರೋ ಹೇಳಿದ ತಕ್ಷಣ ಸತ್ಯವಾಗುವುದಿಲ್ಲ, ಪ್ರಶ್ನಿಸಿ ನಿಜಾಂಶವನ್ನು ತಿಳಿಯಬೇಕು. ಹೊಸ ನೆಲೆಯಲ್ಲಿ ಆಲೋಚಿಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.  ವೇದಗಳು ಅಪೌರುಷೇಯ ಎನ್ನುತ್ತಾರೆ. ಅದರಲ್ಲಿನ ಅಂಶಗಳನ್ನು ವೈಚಾರಿಕತೆಯಿಂದ ವಿಮರ್ಶೆಗೆ ಒಳಪಡಿಸಬೇಕು. ಜ್ಞಾನಕ್ಕೆ ಮೂಲ ಆಧಾರವೇ ಪ್ರಯೋಗ ಎಂದು ವಿಶ್ಲೇಷಿಸಿದರು.  ಹಸುವಿನ (ಗೋಮಾತೆ) ಉಚ್ವಾಸ, ನಿಶ್ವಾಸ ಎರಡರಲ್ಲೂ ಆಮ್ಲಜನಕವಿರುತ್ತದೆ ಎಂದು ವಾದಿಸುವವರಿದ್ದಾರೆ. ದೇಶದಲ್ಲಿ 10 ಸಾವಿರ ಕೆಮಿಸ್ಟ್ರಿ ಪ್ರಯೋಗಾಲಯಗಳಿವೆ. ಅಲ್ಲಿ ಪರೀಕ್ಷಿಸಿದರೆ ಸತ್ಯ ಹೊರ ಬರುತ್ತದೆ ಎಂದರು.  ಡಾರ್ವಿನ್‌ನ ವಿಕಾಸವಾದವನ್ನು ಅಲ್ಲಗಳೆಯುತ್ತಾರೆ. ಮತಾಂತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಮಂದಿ ಸಮಾನತೆಯ ಬಗ್ಗೆ ಪ್ರಸ್ತಾಪಿಸುವುದಿಲ್ಲ. ‘ಎಲ್ಲವೂ ಹಣೆಬರಹ’ ಎನ್ನುತ್ತಾರೆ, ಅದನ್ನು ಬರೆದವರು ಯಾರೆಂದು ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.  ಅದ್ವೈತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯರು ಬರೆದ ಬ್ರಹ್ಮಸೂತ್ರ ಭಾಷ್ಯದಲ್ಲಿ ‘ಮನು ಹೇಳಿದ್ದೇ ಸತ್ಯ’ ಎಂದು ತಿಳಿಸುತ್ತಾರೆ. ರಾಮಾನುಜಾಚಾರ್ಯರು, ಮಧ್ವಾಚಾರ್ಯರ ವಿಚಾರಗಳಲ್ಲೂ ಇದು ವ್ಯಕ್ತವಾಗಿದೆ. ನ್ಯಾಯಮೂರ್ತಿಗಳಾಗಿದ್ದ ರಾಮಾಜೋಯಿಸ್ ಅವರು ‘ಮನು ಸಂಹಿತೆಗಿಂತ ಯಾವ ಸಂವಿಧಾನ ಬೇಕು’ ಎಂದು ಕೇಳಿದ್ದರು ಎಂದು ತಿಳಿಸಿದರು.  ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಭಾವಿಸುತ್ತಾರೆ, ಅದು ತನ್ನ ಆಹಾರ ಹುಡುಕಿ ಹೊರಟರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನಚಿಕೇತನ ಪ್ರಶ್ನಿಸುವ ಮನೋಧರ್ಮವನ್ನು ಬಿಡಿಸಿಟ್ಟರು. ಗುಲಾಮಿ ಪದ್ಧತಿಯ ಬಗ್ಗೆ ಅರಿಸ್ಟಾಟಲ್ ಹೊಂದಿದ್ದ ನಿಲುವನ್ನು ವಿರೋಧಿಸಿದರು. ಯಾವುದೇ ದರ್ಶನದಲ್ಲಿ ಮಾನವೀಯ ಸ್ಪರ್ಶವಿರಬೇಕು ಎಂದು ಅಭಿಪ್ರಾಯಪಟ್ಟರು.  ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್. ಸುಜಾತಾ, ರಾಜೇಂದ್ರ ಪ್ರಸಾದ್ ಮಾತನಾಡಿದರು. ಅನಂತಮ್ಮ ಬಿ.ವಿ. ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net