ವಚನ ಸಂವಾದದಲ್ಲಿ ಅರ್ಥಪೂರ್ಣ ಚರ್ಚೆ

dvg-vachana-samvada.jpg
Published on

ದಾವಣಗೆರೆ  : ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಎ.ವಿ.ಕೆ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ವಚನ ಸಂವಾದ ಕಾರ್ಯಕ್ರಮದಲ್ಲಿ ಬಸವ ತತ್ವ, ವಚನ ಸಿದ್ಧಾಂತ, ಮೌಲ್ಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.  ಆಸಕ್ತಿಯಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದ ಮಠಾಧೀಶರಿಗೆ ಕುತೂಹಲದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಸಂವಾದದ ಮೂಲಕ ಬಸವಾದಿ ಶಿವಶರಣರು ಸಮಾಜಕ್ಕೆ ನೀಡಿದ ವಿಚಾರಗಳ ಬಗ್ಗೆ ಚಿಂತನ ಮಂಥನ ಮಾಡಲಾಯಿತು.  ಲಿಂಗದ ಪರಿಕಲ್ಪನೆ ಬಸವಣ್ಣ ಅವರ ಕಾಲದಲ್ಲಿ ಬಂದಿತೆ ಅಥವಾ ಅದಕ್ಕೂ ಮೊದಲೇ ಇತ್ತೆ ಎಂಬುದು ವಿದ್ಯಾರ್ಥಿನಿ ಜಯಶ್ರೀ ಅವರ ಪ್ರಶ್ನೆಯಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ. ಪ್ರಭಾಕರ ಲಕ್ಕೋಳ್ ಉತ್ತರಿಸಿ, ವಚನ ಚಳವಳಿಯು ಸ್ಥಾವರ ಪೂಜೆಯನ್ನು ನಿರಾಕರಿಸಿತು. ಸಮಾನತೆಯ ಸಂದೇಶ ಸಾರಲು ಇಷ್ಟಲಿಂಗ ಪರಿಕಲ್ಪನೆಯನ್ನು ಬಸವಣ್ಣ ಅವರು ತಂದರು ಎಂದು ತಿಳಿಸಿದರು.  ಸ್ವಾಮೀಜಿಗಳ ಹೆಸರಿನ ಮುಂದೆ ‘ಶ್ರೀ ಮ.ನಿ.ಪ್ರ’ ಎಂದಿರುತ್ತದೆ. ಹಾಗಂದರೆ ಏನು ಮತ್ತು ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳುವರೆ ಎಂದು ರೇಖಾ ಎಂಬ ವಿದ್ಯಾರ್ಥಿನಿ ಪ್ರಶ್ನಿಸಿದಳು. ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ ಉತ್ತರಿಸಿ, ‘ಶ್ರೀ ಮ.ನಿ.ಪ್ರ’ ಎಂದರೆ ‘ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ’ ಎಂದರ್ಥ. ಅವರು ಆ ರೀತಿ ನಡೆದುಕೊಳ್ಳುವರೇ ಎಂಬುದು ಅವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.  ಊಟದ ಪದ್ಧತಿಯಲ್ಲಿ ತಾರತಮ್ಯ ಇದೆಯಲ್ಲ ಎಂದು ಸುಕನ್ಯಾ ಎಂಬುವರು ಕೇಳಿದರು. ವಚನಕಾರರ ದಾಸೋಹ ಪರಿಕಲ್ಪನೆಯಲ್ಲಿ ತಾರತಮ್ಯವಿಲ್ಲ ಎಂದು ಡಾ. ಪ್ರಭಾಕರ ಲಕ್ಕೋಳ್ ತಿಳಿಸಿದರು.  ಗಂಡು-ಹೆಣ್ಣು ಎರಡೇ ಜಾತಿ ಇರುವುದು ಎಂದು ತಿಳಿಸಿದ ಬಸವಣ್ಣ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು. ಈಗಿನ ಸಮಾಜದಲ್ಲಿ ಜಾತಿ ಬಡಿದಾಟವಿದೆ ಎಂದು ವಿದ್ಯಾರ್ಥಿ ಆಕಾಶ್ ಕಳವಳ ವ್ಯಕ್ತಪಡಿಸಿದರು.  ವಚನಕಾರರು ಮಾನವೀಯತೆಯನ್ನು ಪ್ರತಿಪಾದಿಸಿದರು. ಅದು ಇಂದಿನ ವ್ಯವಸ್ಥೆಯಲ್ಲಿ ಅನಾವರಣಗೊಂಡಿದೆಯೆ ಎಂದು ಗೌತಮಿ ಪ್ರಶ್ನಿಸಿದರು. ಮನುಕುಲಕ್ಕೆ ಒಳಿತಾಗಬೇಕು ಎಂಬುದು ವಚನಕಾರರ ಆಶಯವಾಗಿತ್ತು. ಎಲ್ಲರಲ್ಲೂ ಶಿವನ ಚೈತನ್ಯವಿದೆ ಎಂಬುದು ಅವರ ದೃಷ್ಟಿಕೋನವಾಗಿತ್ತು. ಬಸವತತ್ವ ಅನುಸರಿಸುವ ಮಠ, ಸಂಘಟನೆಗಳಲ್ಲಿ ಇದು ಆಚರಣೆಯಲ್ಲಿದೆ ಎಂಬ ಉತ್ತರ ಸ್ವಾಮೀಜಿಗಳಿಂದ ಬಂದಿತು.  ಕೆಲವರು ಉದ್ಯಮಿಗಳು, ರಾಜಕಾರಣಿಗಳು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಕೆಟ್ಟ ಕೆಲಸ ಮಾಡುತ್ತಾರಲ್ಲ ಎಂಬ ಪ್ರಶ್ನೆಗೆ, ಸ್ವಾಮೀಜಿಗಳು ಕೆಟ್ಟ ಕೆಲಸಕ್ಕೆ ಪ್ರೋತ್ಸಾಹಿಸುವುದಿಲ್ಲ ಎಂಬ ಉತ್ತರ ದೊರೆಯಿತು.  ಹನಿ ಟ್ರಾೃಪ್, ಸುಶಿಕ್ಷಿತರೇ ಮೌಢ್ಯವನ್ನು ಅನುಸರಿಸುತ್ತಿರುವುದು, ಮಡಿವಂತಿಕೆ, ಶರಣರ ಮೌಲ್ಯಗಳು, ಅಂತರಂಗ-ಬಹಿರಂಗ ಶುದ್ಧಿ, ಲಿಂಗಾಯತ ಧರ್ಮ, ಕಲ್ಯಾಣ ರಾಜ್ಯ, ವಚನಗಳು-ಸಿದ್ಧಾಂತ ಶಿಖಾಮಣಿ ಇವೆರಡರಲ್ಲಿ ಯಾವುದು ಜೀವಪರ?, ವಚನಕಾಋರು ಏಕೆ ಅಂಕಿತನಾಮ ಇಟ್ಟುಕೊಳ್ಳುತ್ತಾರೆ, ಮಹಿಳಾ ಮಠಾಧೀಶರನ್ನು ಮಾಡಲು ಒಪ್ಪಿಗೆ ಇದೆಯೇ ಎಂಬ ವಿಚಾರಗಳು ಸಂವಾದದಲ್ಲಿ ಪ್ರಸ್ತಾಪವಾದವು.  ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net