ದೇವರಿಲ್ಲ ಎಂದ ಬುದ್ಧನನ್ನು ದೇವರು ಮಾಡಿದ್ದೇವೆ

dvg-samvada_20250520000701032.jpg
Published on

ದಾವಣಗೆರೆ : ಬುದ್ಧ ದೇವರಿಲ್ಲ ಎಂದ, ಆತನನ್ನೇ ನಾವು ದೇವರು ಮಾಡಿದ್ದೇವೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.  ಉಷಾ ಪ್ರಕಾಶನ ಮತ್ತು ಕಾವ್ಯ ಮಂಡಳದ ವತಿಯಿಂದ ಅಮೃತ್ ನಗರದ ಪುಟಗನಾಳ್ ರಸ್ತೆಯಲ್ಲಿರುವ ಅರನ್ಯ ಸಿರಿ ಫಾರ್ಮ್ ಹೌಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಬುದ್ಧನ ಪ್ರಸ್ತುತತೆ’ ಕುರಿತ ಸಂವಾದ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.  ಬುದ್ಧನ ಮಧ್ಯಮ ಮಾರ್ಗವನ್ನು ಅನುಸರಿಸಿ ನಡೆದರೆ ಸಾಕು, ಅದು ಬಿಟ್ಟು ಸ್ವರ್ಗ ಮತ್ತು ಮುಕ್ತಿಯ ಕಲ್ಪನೆಯನ್ನು ನಮ್ಮೊಳಗೆ ನಾವು ಬಿತ್ತಿಕೊಂಡು ಮೌಢ್ಯದತ್ತ ನಡೆಯುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.  ಸಾಮಾಜಿಕ ಜಾಲತಾಣಗಳಲ್ಲಿ ಸದ್ಯದ ಪರಿಸ್ಥಿತಿಯ ಕುರಿತ ಅಭಿಪ್ರಾಯಗಳನ್ನು ನೋಡಿದರೆ ಭಯವಾಗುತ್ತದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರೇನಾದರೂ ಈಗ ಇದ್ದಿದ್ದರೆ ಏನು ಹೇಳುತ್ತಿದ್ದರು ಎಂಬುದನ್ನು ಊಹಿಸುವುದು ಕಷ್ಟ ಎಂದರು.  ಮನುಷ್ಯನ ಮನಸ್ಸು ಕಲುಷಿತಗೊಂಡಿದೆ ನಿಜ, ಆದರೆ ಯುದ್ಧ ಎಲ್ಲದಕ್ಕೂ ಪರಿಹಾರವಲ್ಲ. ಮನುಷ್ಯನ ಒಳಗಿನ ಅಶಾಂತಿಯನ್ನು ಹೊರ ಹಾಕುವುದು ಧರ್ಮವಲ್ಲ, ಆತನ ಒಳಗಿರುವ ಒಳ್ಳೆಯದನ್ನು ನೀಡುವುದೇ ಧರ್ಮ ಎಂದು ಹೇಳಿದರು.  ಲೇಖಕ ಬಾ.ಮ. ಬಸವರಾಜಯ್ಯ ಮಾತನಾಡಿ, ಬುದ್ಧನನ್ನು ಗುರಾಣಿ ಮಾಡಿ, ಬಸವಣ್ಣನನ್ನು ವಾಣಿಜ್ಯ ಕಾರಣಕ್ಕೆ ಹಾಗೂ ಅಂಬೇಡ್ಕರರ ಆಶಯಗಳನ್ನು ಇಟ್ಟುಕೊಂಡು ಈಗಿನ ಕಾಲಘಟ್ಟದಲ್ಲಿ ಅವುಗಳ ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಬದಲಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.  ಸಾಹಿತಿ ಪಾಪು ಗುರು ವಿಷಯದ ಕುರಿತು ಮಾತನಾಡಿದರು. ಡಾ. ನಾಗಭೂಷಣ ಗೌಡ ಸಂವಾದಕ್ಕೆ ಚಾಲನೆ ನೀಡಿದರು. ಯುದ್ಧ ಮತ್ತು ಶಾಂತಿ ಹಾಗೂ ಪ್ರಸ್ತುತ ಮಾನವರ ತಲ್ಲಣಗಳ ಬಗ್ಗೆ ಚರ್ಚೆಯಾದವು. ಡಯಟ್ನ ನಿವೃತ್ತ ಪ್ರಾಚಾರ್ಯ ಎಚ್.ಕೆ. ಲಿಂಗರಾಜು ಮಾತನಾಡಿದರು.  ಕೆ.ಎಸ್. ಈಶ್ವರಪ್ಪ, ಅರನ್ಯ ಸಿರಿ ಮಾಲೀಕ ಮಹೇಶ್ವರಪ್ಪ ಇದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂತೇಬೆನ್ನೂರು ಫೈಜ್ನಟ್ರಾಜ್ ಅವರನ್ನು ಉಷಾ ಪ್ರಕಾಶನದ ವತಿಯಿಂದ ಸನ್ಮಾನಿಸಲಾಯಿತು.  ವೀಣಾ ಮಹಾಂತೇಶ್, ರಾಜೇಂದ್ರ ಪ್ರಸಾದ್, ಹೊನ್ನಾಳಿ ಶಿವಕುಮಾರ್, ಕೃಷ್ಣ ನಾಯಕ್, ಪ್ರೊ. ಅಂಜಿನಪ್ಪ, ಫಕ್ಕಿರೇಶ್ ಆದಾಪುರ ಪಾಲ್ಗೊಂಡಿದ್ದರು. ಅರನ್ಯ ಪ್ರಾರ್ಥಿಸಿದರು, ಸಂದೀಪ್ ಉಕ್ಕಿನ ಗಟ್ಟಿ ಸ್ವಾಗತಿಸಿದರು, ನಾಗರಾಜ ಸಿರಿಗೆರೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net