ಬೆಳೆಯಲಿ ಉದ್ಯಮ, ಅರಳಲಿ ಕೃಷಿ ಲೋಕ

dvg-zp-meeting.jpg
Published on

ಒಂದು ಕಾಲಕ್ಕೆ ‘ಮ್ಯಾಂಚೆಸ್ಟರ್’ ಎಂದು ಕರೆಸಿಕೊಳ್ಳುತ್ತಿದ್ದ ದಾವಣಗೆರೆ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆಗಬೇಕು. ಯುವಜನರ ಕೌಶಲಾಭಿವೃದ್ಧಿಗೆ ಒತ್ತು ಕೊಡಬೇಕು. ಕಾರ್ಮಿಕರು ಗುಳೆ ಹೋಗುವುದು ತಪ್ಪಬೇಕು. ಶಿಕ್ಷಕರು, ವೈದ್ಯರ ನೇಮಕಾತಿಯಾಗಬೇಕು.  ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಸಮಾಜದ ವಿವಿಧ ವರ್ಗಗಳ ಜನರಿಂದ ಕೇಳಿಬಂದ ಸಲಹೆಗಳಿವು.  ಉದ್ಯಮಿಗಳು, ರೈತ ಮುಖಂಡರು, ಶಿಕ್ಷಣ ತಜ್ಞರು, ವೈದ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ವಿವಿಧ ವರ್ಗಗಳ ಪ್ರಮುಖರು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.  ದಾವಣಗೆರೆಯಲ್ಲಿದ್ದ ಜವಳಿ ಮಿಲ್‌ಗಳು ಬಂದ್ ಆಗಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಉತ್ತೇಜನ ನೀಡಿದರೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ತಿಳಿಸಿದರು.  ಕೌಶಲಾಭಿವೃದ್ಧಿಗೆ ಒತ್ತು ಕೊಡಬೇಕು. ಐಟಿಐ, ಡಿಪ್ಲೊಮಾ ಪೂರೈಸಿದ ಯುವಜನರು ಬೆಂಗಳೂರಿನ ಕಡೆಗೆ ಮುಖ ಮಾಡದೇ ಇಲ್ಲೇ ಉಳಿದು ಸ್ಥಳೀಯ ಉದ್ಯಮ ವಲಯವನ್ನು ಬೆಳೆಸುವಂತಾಗಬೇಕು ಎಂದು ಉದ್ಯಮಿ ಎಚ್.ಎಂ. ಉಮೇಶ್ ಹೇಳಿದರು.  ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಸ್ಥಳೀಯ ಕೃಷಿ ಕಾರ್ಮಿಕರು ಅನ್ಯ ಜಿಲ್ಲೆಗಳಿಗೆ ಗುಳೆ ಹೋಗುತ್ತಾರೆ. ಅದನ್ನು ತಪ್ಪಿಸಿ ಅವರು ಇಲ್ಲೇ ಉಳಿಯುವಂತೆ ಮಾಡಿ ಅವರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಶೇ. 100 ರಷ್ಟು ಅನುಷ್ಠಾನ ಮಾಡಬೇಕು. ಈರುಳ್ಳಿ ಶೀತಲೀಕರಣ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.  ಕಾಲೇಜುಗಳಲ್ಲಿ ಅರೆಕಾಲಿಕ ಶಿಕ್ಷಕರನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ. ಕಾಯಂ ಶಿಕ್ಷಕರ ನೇಮಕವಾಗಬೇಕು. ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದರೆ ಅವರ ಜಾಗಕ್ಕೆ ಹೊಸಬರ ನೇಮಕ ಮಾಡುತ್ತಿಲ್ಲ. ಇದರ ಜತೆಗೆ ಸಮರ್ಪಕ ಮೇಲ್ವಿಚಾರಣೆಯೂ ಇರಬೇಕು ಎಂದು ಶಿಕ್ಷಣ ತಜ್ಞ ಡಾ.ಎಚ್.ವಿ. ವಾಮದೇವಪ್ಪ ಸಲಹೆ ನೀಡಿದರು.  ಹಿಮೊಫಿಲಿಯಾ ಸೇರಿದಂತೆ ವಿರಳ ರಕ್ತರೋಗದಿಂದ ಬಳಲುವವರ ಜೀವನ ಮಟ್ಟ ಸುಧಾರಣೆಗೆ ಗಮನ ಹರಿಸಬೇಕಿದೆ. ಅವರಲ್ಲಿ ಉಂಟಾಗುವ ಅಂಗವೈಕಲ್ಯ ತಡೆಗಟ್ಟಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ ಹನಗವಾಡಿ ತಿಳಿಸಿದರು.  ಚನ್ನೇಶ್ ಚಟ್ನಳ್ಳಿ ಮಾತನಾಡಿ, ಕುಟುಂಬ ಆರ್ಥಿಕವಾಗಿ ಸಬಲಗೊಂಡರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದೆ. ಆಹಾರೋತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕಿದೆ ಎಂದು ಹೇಳಿದರು.  ಸಮಿತಿಯ ಸದಸ್ಯ ಎಸ್.ಟಿ. ಬಾಗಲಕೋಟಿ, ಜಿ.ಪಂ. ಸಿಇಒ ಡಾ. ಸುರೇಶ ಬಿ. ಇಟ್ನಾಳ್, ಟೆಕ್ಸ್‌ಟೈಲ್ ಪಾರ್ಕ್ ಅಧ್ಯಕ್ಷ ಕೋಮಲ್ ಜೈನ್, ಜವಳಿ ಇಲಾಖೆ ಉಪ ನಿರ್ದೇಶಕ ಶಿವಲಿಂಗಪ್ಪ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಡಿಎಚ್‌ಒ ಡಾ. ಷಣ್ಮುಖಪ್ಪ, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ, ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದರು.  ...  (ಕೋಟ್)  ರೈತರಿಗೆ ಸಮರ್ಪಕ ನೀರು ಮತ್ತು ವಿದ್ಯುತ್ ಸೌಲಭ್ಯ ಒದಗಿಸಿದರೆ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ. ಕೆರೆಗಳ ಅಭಿವೃದ್ಧಿಯಾಗಬೇಕು. ಅವುಗಳಿಗೆ ನೀರು ತುಂಬಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಯಾಗಬೇಕು. ಚಿಗಟೇರಿ ಜಿಲ್ಲಾಸ್ಪತ್ರೆಗೆ ಎಂಆರ್‌ಐ ಯಂತ್ರದ ಅಗತ್ಯವಿದೆ. ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಾಗಬೇಕು. ಹೊರಗುತ್ತಿಗೆ ಪದ್ಧತಿಯ ಮೇಲೆ ಕಾರ್ಮಿಕರ ನೇಮಕಾತಿ ಕೈಬಿಟ್ಟು ನೇರ ನೇಮಕಾತಿ ಮಾಡಬೇಕು.   ಕೆ.ಎಸ್. ಬಸವಂತಪ್ಪ, ಮಾಯಕೊಂಡ ಶಾಸಕ  ...  (ಕೋಟ್)  ಚನ್ನಗಿರಿ ತಾಲೂಕು ಅತ್ಯಂತ ಹಿಂದುಳಿದಿದೆ. ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲ. ತಾಲೂಕಿನಲ್ಲಿ 150 ಶಾಲಾ ಕೊಠಡಿಗಳ ಅಗತ್ಯವಿದೆ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಡಯಾಲಿಸಿಸ್ ಯಂತ್ರಗಳನ್ನು ಆಪರೇಟ್ ಆಡಲು ಸಿಬ್ಬಂದಿ ಇಲ್ಲ. ತಾಲೂಕಿನ ಪ್ರಮುಖ ಬೆಳೆಯಾದ ಅಡಕೆಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕು. ಇದೆಲ್ಲದರ ಜತೆಗೆ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು.   ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net