

ದಾವಣಗೆರೆ : ದೀಪಾವಳಿ ಬೆಳಕಿನ ಹಬ್ಬ. ಮನೆ ಮನೆಯಲ್ಲೂ ಹಣತೆಗಳು ಬೆಳಗುತ್ತವೆ. ಜತೆಗೆ ಪಟಾಕಿಗಳು ಸದ್ದು ಮಾಡುತ್ತವೆ. ಈ ಸಂಭ್ರಮದ ನಡುವೆ ಶಬ್ದ ಮತ್ತು ವಾಯು ಮಾಲಿನ್ಯ ಆಗದಂತೆ ಎಚ್ಚರ ವಹಿಸಬೇಕಿದೆ. ಎಲ್ಲರೂ ಇದನ್ನು ಅರ್ಥ ಮಾಡಿಕೊಂಡಾಗ ಹಬ್ಬವು ಪರಿಸರ ಸ್ನೇಹಿ ಮತ್ತು ಅರ್ಥಪೂರ್ಣವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ದಾವಣಗೆರೆ ಕಚೇರಿಯಲ್ಲಿ ಬುಧವಾರ ಸಂವಾದವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಟಾಕಿ ವರ್ತಕರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಪಟಾಕಿ ವ್ಯಾಪಾರ, ಅವುಗಳ ಬಳಕೆಯಲ್ಲಿ ವಹಿಸಬೇಕಾದ ಎಚ್ಚರಿಕೆ, ಸರ್ಕಾರ ರೂಪಿಸಿದ ನಿಯಮಗಳ ಕುರಿತು ಚರ್ಚಿಸಲಾಯಿತು. ಪಟಾಕಿ ಮಾರುಕಟ್ಟೆಯ ಒಳನೋಟ, ಹಬ್ಬದ ಸಂದರ್ಭದಲ್ಲಿ ನಡೆಯುವ ವಹಿವಾಟು, ಮಾರಾಟಕ್ಕೆ ಮಾಡಿರುವ ಮಳಿಗೆಗಳ ವ್ಯವಸ್ಥೆ, ಅಲ್ಲಿ ಒದಗಿಸಿರುವ ಸೌಲಭ್ಯಗಳ ಕುರಿತು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ದಿನೇಶ ಕೆ. ಶೆಟ್ಟಿ, ಅಧ್ಯಕ್ಷ ಪಿ.ಸಿ. ಶ್ರೀನಿವಾಸ, ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಡಿ.ಎಸ್. ಸಿದ್ದಣ್ಣ ಮಾಹಿತಿ ನೀಡಿದರು. ಜಿಲ್ಲಾಡಳಿತದ ಸೂಚನೆಯಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ತಂಜಿಲಾ ವಿವರಿಸಿದರು. ... (ಬಾಕ್ಸ್) ನಿಯಮ ಪಾಲನೆ, ಸುರಕ್ಷತೆಗೆ ಆದ್ಯತೆ ಸರ್ಕಾರದ ನಿಯಮಗಳ ಪ್ರಕಾರವೇ ಪಟಾಕಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗಿರುವುದರಿಂದ ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿ, ಸುರಕ್ಷತೆಯ ಕಡೆಗೆ ಗಮನ ಇರಲಿ ಎಂದು, ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು. ಜಿಲ್ಲೆಯ ಅಧಿಕಾರಿಗಳ ಸಹಕಾರ ಉತ್ತಮವಾಗಿದೆ. ನಾವೂ ಕೂಡಾ ಕಾನೂನು ಚೌಕಟ್ಟಿನ ಒಳಗೇ ಪಟಾಕಿ ವ್ಯಾಪಾರ, ವಹಿವಾಟಿನಲ್ಲಿ ತೊಡುತ್ತೇವೆ. ಸಾರ್ವಜನಿಕರೂ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಶಾಲೆ, ಕಾಲೇಜು, ಆಸ್ಪತ್ರೆ, ವೃದ್ಧಾಶ್ರಮದಂಥ ಸ್ಥಳಗಳಲ್ಲಿ ಪಟಾಕಿ ಹಚ್ಚಿದರೆ ತೊಂದರೆಯಾಗುತ್ತದೆ. ಅದಕ್ಕೆಲ್ಲ ಅವಕಾಶ ನೀಡಬಾರದು. ಪಟಾಕಿ ಬಳಸುವಾಗ ಮಕ್ಕಳ ಸುರಕ್ಷತೆಯ ಕಡೆಗೆ ಪಾಲಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ 4 ಮಂದಿ ಪಟಾಕಿ ಸಗಟು ವ್ಯಾಪಾರಸ್ಥರಿದ್ದಾರೆ. ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ 74 ಪಟಾಕಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅಗ್ನಿಶಮನ ತರಬೇತಿ ಪಡೆದವರಿಗೇ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ... (ಬಾಕ್ಸ್) ಹಸಿರು ಪಟಾಕಿಗೆ ಮಾತ್ರ ಅವಕಾಶ ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶವಿದೆ. ನಿಷೇಧಿತ ಪಟಾಕಿಗಳನ್ನು ಪಯೋಗಿಸುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ತಂಜಿಲಾ ಹೇಳಿದರು. 125 ಡೆಸಿಬಲ್ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸೂಚಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ರ ವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ಆಸ್ಪತ್ರೆ, ಶಾಲೆ, ವೃದ್ಧಾಶ್ರಮ ಇರುವ ಕಡೆಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ತಿಳಿಸಿದರು. ಒಂದೂವರೆ ತಿಂಗಳಿಂದ ತಪಾಸಣೆ ನಡೆಸಿ ಹಸಿರು ಪಟಾಕಿಗಳು ಮಾತ್ರ ಇರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಪರವಾನಗಿ ನೀಡಲಾಗಿದೆ. ಈ ಕಾರ್ಯದಲ್ಲಿ ಸ್ಥಳೀಯ ಸಂಸ್ಥೆಗಳೂ ಕೈಜೋಡಿಸಿವೆ. ಕಸ ಸಾಗಿಸುವ ವಾಹನಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ದೀಪಾವಳಿ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಪರೀಕ್ಷಿಸಲು ಸಂಚಾರ ಪೊಲೀಸ್ ಠಾಣೆ ಹಾಗೂ ಭಗತ್‌ಸಿಂಗ್ ನಗರದಲ್ಲಿ ಉಪಕರಣ ಅಳವಡಿಸಲಾಗಿದೆ ಎಂದು ತಿಳಿಸಿದರು. ...