ಕೃತಿಯ ಪಾತ್ರಗಳಿಗೆ ಬೇಕು ಪ್ರಾದೇಶಿಕ ಭಾಷಾ ಸೊಗಡು

dvg-sahitya-samvada.jpg
Published on

ದಾವಣಗೆರೆ : ಸಾಹಿತ್ಯ ಕೃತಿಯ ಪಾತ್ರಗಳು ತಮ್ಮ ಪ್ರದೇಶದ ಭಾಷೆಯಲ್ಲಿ ಮಾತನಾಡಿದಾಗ ಹೆಚ್ಚು ಪರಿಣಾಮಕಾರಿ ಎಂದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ್ ಹೇಳಿದರು.  ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟಬಲ್ ಟ್ರಸ್ಟ್ ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸೃತಿಕ ಬಳಗದ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸಾಹಿತಿ ದೇವನೂರು ಮಹದೇವ ಅವರ ಕೃತಿಗಳಲ್ಲಿ ಬರುವ ಪಾತ್ರಗಳಿಗೆ ಚಾಮರಾಜ ನಗರ ಭಾಗದ ಸೊಗಡಿನ ಭಾಷೆಯಿದೆ. ಉತ್ತರ ಕರ್ನಾಟಕದಲ್ಲಿ ಭಾಷೆ ಮತ್ತು ಅನುಭವ ಬದಲಾಗುತ್ತದೆ. ಸ್ಥಳೀಯ ಸೊಗಡು ಬೆರೆತಾಗ ನೈಜತೆಗೆ ಹತ್ತಿರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಕತೆಗಾರ ಸೃಷ್ಟಿಸುವ ಪಾತ್ರಗಳು ಸಶರೀರವಾಗಿ ಸಾಕ್ಷಾತ್ಕಾರಗೊಳ್ಳಬೇಕು. ಕಥನ ಬರವಣಿಗೆಯಲ್ಲಿ ಕಲ್ಪನೆ ಇದ್ದರೂ ಓದುಗರಿಗೆ ನೈಜ ಎನಿಸುವಂತಿರಬೇಕು. ಕತೆಗಳು ಬರೆಯುತ್ತ ಹೋದಂತೆ ಸ್ವರೂಪ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ತಾವು ರಚಿಸಿದ ‘ತೇರು’ ಕಾದಂಬರಿಯ ಹಿನ್ನೆಲೆ, ತಮ್ಮ ಕೃತಿಯಲ್ಲಿ ಗೊಂದಲಿಗರ ಭಾಷೆಯ ಬಳಕೆ, ‘ದೇಸಗತಿ’ ಕೃತಿಯ ಕಥಾವಸ್ತುವಿನ ಬಗ್ಗೆ ವಿವರಿಸಿದರು.  ಕೃಷಿ ವಿಜ್ಞಾನಿ, ಸಾಹಿತಿ ಡಾ. ಕೆ.ಎನ್. ಗಣೇಶಯ್ಯ ಮಾತನಾಡಿ, ಅನುಭವದಿಂದ ಮಾತ್ರ ಒಳ್ಳೆಯ ಸಾಹಿತ್ಯ ರಚನೆ ಸಾಧ್ಯ ಎಂಬುದು ತಪ್ಪು ಕಲ್ಪನೆ. ಅನುಭವ ಒಂದೇ ಮುಖ್ಯವಲ್ಲ, ಕಲ್ಪನೆಯೂ ಇರಬೇಕು ಎಂದು ಮಹಾಭಾರತದ ಬಗ್ಗೆ ಪ್ರಸ್ತಾಪಿಸಿದರು.  ಸಾಹಿತಿಗಳಾದ ಬಾ.ಮ. ಬಸವರಾಜಯ್ಯ, ಡಾ.ಆನಂದ ಋಗ್ವೇದಿ, ಮಲ್ಲಮ್ಮ, ಓಂಕಾರಯ್ಯ ತವನಿಧಿ, ವೀರಭದ್ರಪ್ಪ ತೆಲಗಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಾಹಿತ್ಯ ರಚನೆಯ ಕ್ರಮ, ಭಾಷೆಯ ಬಳಕೆ, ಅಧ್ಯಯನ, ಸಂಶೋಧನೆ ಇನ್ನಿತರ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತು.  ಟ್ರಸ್ಟ್ ಅಧ್ಯಕ್ಷ ಬಿ.ಎಚ್. ಆಂಜನೇಯ ಇದ್ದರು. ಕಾರ್ಯಕ್ರಮ ಸಂಯೋಜಕ ಮಹಾಂತೇಶ್ ಬಿ. ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ನಿಟ್ಟೂರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net