

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರ ಹಲವು ದೃಷ್ಟಿಯಿಂದ ಮಹತ್ವ ಪಡೆದಿದೆ. ವೀರ ಮದಕರಿ ನಾಯಕನ ಸಮಾಧಿ ಇಲ್ಲಿದೆ. ಈ ಮಣ್ಣಿನ ನೂರಾರು ಹೋರಾಟಗಾರರು ದೇಶದ ಸ್ವಾತಂತ್ರೃ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಐತಿಹಾಸಿಕ ಹಿನ್ನೆಲೆಯಿದೆ. ಹಳ್ಳಿಗಳೇ ಹೆಚ್ಚಾಗಿರುವ ಈ ಪ್ರದೇಶ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.
ಹದಗೆಟ್ಟ ರಸ್ತೆಗಳು, ಸೋರುವ ಶಾಲಾ ಕೊಠಡಿಗಳು, ಶಿಥಿಲಗೊಂಡ ಅಂಗನವಾಡಿ ಕೇಂದ್ರಗಳು ಅಲ್ಲಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತವೆ. ಇದೆಲ್ಲವನ್ನೂ ಸರಿಪಡಿಸಿ ಕ್ಷೇತ್ರಕ್ಕೆ ಕಾಯಕಲ್ಪ ನೀಡುವುದು ಮಾಯಕೊಂಡದ ನೂತನ ಶಾಸಕ ಕೆ.ಎಸ್. ಬಸವಂತಪ್ಪ ಅವರ ಮೊದಲ ಆದ್ಯತೆಯಾಗಿದೆ. ವಿಜಯವಾಣಿ ಕಚೇರಿಯಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಕನಸುಗಳನ್ನು ಹಂಚಿಕೊಂಡರು.
ಮಾಯಕೊಂಡದಲ್ಲಿ ಡಬಲ್ ರೋಡ್ ನಿರ್ಮಾಣ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಅಲ್ಲಿದ್ದ ಸಮಸ್ಯೆಯನ್ನು ಈಗ ಬಗೆಹರಿಸಲಾಗಿದೆ. ಇನ್ನು 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಕ್ಷೇತ್ರದ ಇತರೆಡೆಗಳಲ್ಲೂ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಬಹಳಷ್ಟು ಕಟ್ಟಡಗಳು ಮಳೆ ಬಂದಾಗ ಸೋರುತ್ತವೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಾಲೆಗಳು ಸುಸ್ಥಿತಿಯಲ್ಲಿರಬೇಕು. ಈ ಬಗ್ಗೆ ಶಿಕ್ಷಣ ಸಚಿವರ ಗಮನ ಸೆಳೆದಿದ್ದೇನೆ. ಕ್ಷೇತ್ರಕ್ಕೆ 50 ಲಕ್ಷ ರೂ. ಅನುದಾನ ಬಂದಿದ್ದು ಅದರಲ್ಲಿ ಹೆಚ್ಚಿನ ಮೊತ್ತವನ್ನು ಶಾಲೆಗಳ ಅಭಿವೃದ್ಧಿಗೆ ನೀಡುವ ಉದ್ದೇಶವಿದೆ ಎಂದು ಹೇಳಿದರು.
ದಾನಿಗಳನ್ನು ಸಂಪರ್ಕಿಸಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ನೆರವು ನೀಡುವಂತೆ ಕೋರಲಾಗುವುದು. ಕ್ಷೇತ್ರದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 25 ರಿಂದ 30 ಹೈಟೆಕ್ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವ ಚಿಂತನೆಯಿದೆ. ಭದ್ರಾ ನಾಲೆಗಳಲ್ಲಿ ತುಂಬಿರುವ ಹೂಳೆತ್ತಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಅಗತ್ಯ ಇರುವ ಕಡೆ ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ 25-30 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು ಸದ್ಯಕ್ಕೆ ಅಷ್ಟೇನೂ ಅಭಾವ ಇಲ್ಲ ಎಂದು ಹೇಳಿದರು.
ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಅದರಿಂದ ಆಗುವ ಹಾನಿಯ ಬಗ್ಗೆ ಹೋಬಳಿವಾರು ಸಮೀಕ್ಷೆ ಕೈಗೊಳ್ಳಬೇಕು. ಬರಪೀಡಿತ ಕ್ಷೇತ್ರವೆಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.