

ದಾವಣಗೆರೆ : ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಧಾತುವಾಗಿದ್ದು, ನಾಡಿನ ಸಾಹಿತಿಗಳು, ಹೋರಾಟಗಾರರು ಅದರಿಂದ ಪ್ರೇರಣೆ ಪಡೆದಿದ್ದಾರೆ ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ, ದಾವಣಗೆರೆ ತಾಲೂಕು ಮಟ್ಟದ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ವಚನ ಸಾಹಿತ್ಯವು ಧರ್ಮ ಗ್ರಂಥವಿದ್ದಂತೆ. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರೂ ಕೂಡಾ ಬಸವಣ್ಣನ ವಿಚಾರಗಳನ್ನು ಮೆಚ್ಚಿಕೊಂಡಿದ್ದರು. ಬಸವಾದಿ ಶರಣರ ವಿಚಾರಧಾರೆಗೆ ಆ ಶಕ್ತಿಯಿದೆ ಎಂದು ಅಭಿಪ್ರಾಯಪಟ್ಟರು. ಬಸವ ಧರ್ಮವು ವಿಶಾಲ ದೃಷ್ಟಿಕೋನವನ್ನು ಹೊಂದಿದೆ. ಅದು ಯಾವುದೇ ಜಾತಿಗೆ ಸೀಮಿತವಾಗಬಾರದು. ಬುದ್ಧ, ಬಸವಣ್ಣನಿಂದ ಹಿಡಿದು ಕುವೆಂಪು ವರೆಗಿನ ಎಲ್ಲ ಮಹನೀಯರೂ ಸಮಾನತೆಯ ಆಶಯವನ್ನೇ ಹೊಂದಿದ್ದರು ಎಂದು ವಿಶ್ಲೇಷಿಸಿದರು. ಸಾಹಿತ್ಯವು ಎಲ್ಲರ ಮನಸ್ಸನ್ನು ಜೋಡಿಸುವ ಕೊಂಡಿಯಾಗಿದೆ. ನಮ್ಮೊಳಗಿನ ವಿಷಮತೆಯನ್ನು ದೂರ ಮಾಡುತ್ತದೆ. ಕನ್ನಡವೆಂಬ ಭಾವ, ಒಲವು ನಮ್ಮೆಲ್ಲರನ್ನು ಬೆಸೆಯುತ್ತದೆ. ಕವಿರಾಜ ಮಾರ್ಗದಿಂದ ಇಲ್ಲಿಯ ವರೆಗಿನ ಸಾಹಿತ್ಯವು ನಮ್ಮನ್ನು ಒಂದುಗೂಡಿಸುತ್ತ ಬಂದಿದೆ ಎಂದು ವಿಶ್ಲೇಷಿಸಿದರು. ಮಧ್ಯ ಕರ್ನಾಟಕದ ದಾವಣಗೆರೆ ರಾಜಧಾನಿಯಾಗಬೇಕಿತ್ತು. ಇಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಇಲ್ಲಿನ ಕನ್ನಡದ ಗುಣ ಎಲ್ಲೆಡೆ ಪಸರಿಸಬೇಕು. ಈ ನೆಲ ದಲಿತ, ಬಂಡಾಯ ಸೇರಿ ಹಲವು ಚಳವಳಿಗೆ ಮೂಲ ಸ್ಥಾಯಿಯಾಗಿದೆ. ಮಹಲಿಂಗರಂಗರಿಂದ ಹಿಡಿದು ದಾವಣಗೆರೆ ಆಸುಪಾಸಿನ ಅನೇಕರು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಲೇಖಕಿ ಬಿ.ಟಿ. ಜಾಹ್ನವಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ ಒಡೇನಪುರ, ಮಾಜಿ ಅಧ್ಯಕ್ಷ ಕೆ. ಶಿವಶಂಕರ್, ದಿಳ್ಯಪ್ಪ, ಮಂಜುನಾಥ್ ಇದ್ದರು. ಕೆ.ಸಿ. ಲಿಂಗರಾಜ ಸ್ವಾಗತಿಸಿದರು. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಬಿ.ಟಿ. ಜಾಹ್ನವಿ ಅವರು ಕನ್ನಡ ಧ್ವಜವನ್ನು ಹಾಲಿ ಅಧ್ಯಕ್ಷ ಶಿವಾನಂದ ಗುರೂಜಿ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ ವಿವಿಧ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.