

ದಾವಣಗೆರೆ : ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ (ಎಐಎಂಎಸ್‌ಎಸ್) ರಾಜ್ಯಮಟ್ಟದ 7ನೇ ಮಹಿಳಾ ಸಮ್ಮೇಳನ ಶನಿವಾರ ಮತ್ತು ಭಾನುವಾರ ನಗರದಲ್ಲಿ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ, ಭ್ರೂಹತ್ಯೆ ಇತ್ಯಾದಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಜತೆಗೆ ಸರ್ಕಾರದ ಗಮನ ಸೆಳೆಯುವುದು ಈ ಸಮ್ಮೇಳನದ ಉದ್ದೇಶವಾಗಿದೆ.
ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳ ಮೂಲಕ ಚಿಂತನ ಮಂಥನ ನಡೆಯಲಿದೆ. ಲೇಖಕರು, ವೈದ್ಯರು, ಪ್ರಾಧ್ಯಾಪಕರು, ವಕೀಲರು, ಹೋರಾಟಗಾರರು, ಕಲಾವಿದರು ಸೇರಿ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ ರೈತಾಪಿ ಮಹಿಳೆಯರು, ಕೂಲಿ ಕಾರ್ಮಿಕರು, ಗೃಹಿಣಿಯರು, ಗಾರ್ಮೆಂಟ್ ಉದ್ಯೋಗಿಗಳು ಭಾಗವಹಿಸಲಿದ್ದಾರೆ.
ರಾಜ್ಯದ 28 ಜಿಲ್ಲೆಗಳಿಂದ 1100 ಪ್ರತಿನಿಧಿಗಳು ಭಾಗವಹಿಸಲಿದ್ದು ದುಡಿಯುವ ವರ್ಗದ 3 ಸಾವಿರ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಹಿಳೆಯರಿಗೆ ಸಂಬಂಧಿಸಿದ ಕೆಲವು ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಆಗಲಿದೆ.
...
(ಬಾಕ್ಸ್)
ಸಿದ್ಧತೆ ಪೂರ್ಣ
ನಗರದ ಪಿಬಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮ್ಮೇಳನ ಆಯೋಜನೆಯಾಗಿದೆ. ಪೆಂಡಾಲ್ ಸಿದ್ಧವಾಗಿದ್ದು 2 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆಯಾಗಿದೆ. ಕಲಾವಿದರು ವೇದಿಕೆಯನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಬಹಿರಂಗ ಅಧಿವೇಶನದ ವೇದಿಕೆಗೆ ಸಾವಿತ್ರಿಬಾಯಿ ಫುಲೆ, ಪ್ರತಿನಿಧಿಗಳ ಅಧಿವೇಶನ ನಡೆಯುವ ವೇದಿಕೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿಡಲಾಗಿದೆ.
ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಸ್ವಾಗತ ಕೋರುವ ಬ್ಯಾನರ್, ಬಂಟಿಂಗ್‌ಗಳನ್ನು ಅಳವಡಿಸಲಾಗಿದೆ. ಗೋಡೆ ಬರಹಗಳ ಮೂಲಕ ಅರಿವು ಮೂಡಿಸಲಾಗಿದೆ. ಆಟೋಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಉದ್ಯಾನವನಗಳಲ್ಲಿ ವಾಯು ವಿಹಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಸಮ್ಮೇಳನಕ್ಕೆ ಬರುವವರಿಗೆ ನಗರದ ಕಲ್ಯಾಣ ಮಂಟಪಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. 6ನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು.
...
(ಕೋಟ್)
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸೇವಾ ಭದ್ರತೆ ಖಾತ್ರಿಪಡಿಸಬೇಕು. ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಸಿಗಬೇಕು ಎಂಬುದು ಈ ಸಮ್ಮೇಳನದ ಘೋಷ ವಾಕ್ಯಗಳಾಗಿವೆ. ಸಮ್ಮೇಳನದಲ್ಲಿ ಸ್ತ್ರೀಯರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವ ಜತೆಗೆ ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರು ಯಾವ ಪಾತ್ರ ವಹಿಸಬೇಕು ಎನ್ನುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು.
ಕೆ. ಭಾರತಿ, ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ