ಬೆಳಕಿನ ಹಬ್ಬದಲ್ಲಿ ಪಟಾಕಿಗಳ ವ್ಯಾಪಾರ ಠುಸ್?

DEVALI PATAKI
Published on

ರಮೇಶ ಜಹಗೀರದಾರ್ ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಈ ಬಾರಿ ಪಟಾಕಿಗಳ ಸದ್ದು ಕ್ಷೀಣಿಸುವ ಸಾಧ್ಯತೆಯಿದೆ. ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಅರ್ಜಿ ಹಾಕಿದವರ ಸಂಖ್ಯೆ ಕಡಿಮೆಯಾಗಿದೆ. ಈ ಬಾರಿ ವ್ಯಾಪಾರವೂ ಅರ್ಧಕ್ಕರ್ಧ ಕುಸಿಯಬಹುದು ಎಂಬ ಲೆಕ್ಕಾಚಾರ ಕೇಳಿಬಂದಿದೆ.

ಕಳೆದ ವರ್ಷ ಪಟಾಕಿಗಳ ಮಾರಾಟಕ್ಕೆ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಅದರಲ್ಲಿ 85 ಮಳಿಗೆಗಳನ್ನು ದಾವಣಗೆರೆ ನಗರದಲ್ಲಿ ಹಾಕಲಾಗಿತ್ತು. ಈ ವರ್ಷ ನಗರದಲ್ಲಿ ಕೇವಲ 52 ಅರ್ಜಿಗಳು ಸ್ವೀಕೃತವಾಗಿವೆ.

ಪ್ರತಿ ವರ್ಷ ಉತ್ಸಾಹದಿಂದ ಪಟಾಕಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರ ಆಗುವುದೋ ಇಲ್ಲವೋ ಎಂಬ ಅನುಮಾನ ಒಂದು ಕಡೆಯಾದರೆ ಕೋವಿಡ್‌ನಿಂದ ರಕ್ಷಿಸಿಕೊಳ್ಳುವ ಸವಾಲೂ ಇದೆ.

ದಾವಣಗೆರೆ ಹೊರತುಪಡಿಸಿ ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿ ಮತ್ತು ಜಗಳೂರು ತಾಲೂಕುಗಳಿಂದ 32 ಅರ್ಜಿಗಳು ಸಲ್ಲಿಕೆಯಾಗಿವೆ.

ಕಳೆದ ವರ್ಷ ನಗರದಲ್ಲಿ 85 ಮಳಿಗೆಗಳಿಂದ 1.5 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ 50ರಿಂದ 60 ಲಕ್ಷ ರೂ. ವ್ಯಾಪಾರವಾದರೆ ಹೆಚ್ಚು ಎಂದು ಹೇಳಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಪಟಾಕಿ ಕೊಳ್ಳುವವರು ಕಡಿಮೆಯಾಗಬಹುದು ಎನ್ನಲಾಗಿದೆ.

ಪ್ರತಿ ವರ್ಷ 2ರಿಂದ 3 ಮಳಿಗೆಗಳನ್ನು ಒಬ್ಬರೇ ವ್ಯಾಪಾರಸ್ಥರು ಹಾಕುತ್ತಿದ್ದರು. ಅಂಥವರು ಈ ಬಾರಿ ಒಂದೇ ಮಳಿಗೆಗೆ ಸೀಮಿತವಾಗಿದ್ದಾರೆ. ಇನ್ನು ಕೆಲವರು ಅದರ ಸಹವಾಸವೇ ಬೇಡವೆಂದು ದೂರ ಉಳಿದಿದ್ದಾರೆ.

ಮಾರ್ಗಸೂಚಿ ಬಿಡುಗಡೆ: ದೀಪಾವಳಿ ಆಚರಣೆ ಮತ್ತು ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ವ್ಯಾಪಾರದ ಮಳಿಗೆಗಳನ್ನು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 2 ಅಂಗಡಿಗಳ ನಡುವೆ 6 ಮೀ.ಗಳಷ್ಟು ಅಂತರ ಇರಲೇಬೇಕು ಎಂಬ ನಿಯಮ ಮಾಡಲಾಗಿದೆ. ಇದರಿಂದ ಜನಜಂಗುಳಿ ಸೇರುವುದನ್ನು ತಪ್ಪಿಸಬಹುದಾಗಿದೆ. ಇದರ ಜತೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಕಾಪಾಡುವುದಕ್ಕೆ ಆದ್ಯತೆ ನೀಡಬೇಕಾಗಿದೆ.

ನ. 10ರಿಂದ 17ರ ವರೆಗೆ ತೆರೆದ ಪ್ರದೇಶದಲ್ಲಿ ತಾತ್ಕಾಲಿಕ ಮಳಿಗೆಗಳಲ್ಲಿ ಪಟಾಕಿಗಳ ವ್ಯಾಪಾರ ಮಾಡುವುದಕ್ಕೆ ಅನುಮತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು.
> ಬಸವಪ್ರಭು ಶರ್ಮ ಜಿಲ್ಲಾ ಅಗ್ನಿಶಾಮಕ ಅಧಿಕಾರಿ


ಮಳಿಗೆ ತೆರೆಯುವ ವ್ಯಾಪಾರಸ್ಥರಿಗೆ ಸಂಘದಿಂದ ಮಾಸ್ಕ್ ನೀಡುತ್ತೇವೆ. ಸುರಕ್ಷತೆಗೆ ಆದ್ಯತೆ ಕೊಡಲಾಗುವುದು. 7 ದಿನಗಳ ಅವಕಾಶ ಇರುವುದರಿಂದ ಗ್ರಾಹಕರು ಗಡಿಬಿಡಿ ಮಾಡಿಕೊಳ್ಳುವ ಅಗತ್ಯವಿಲ್ಲ.
> ಡಿ.ಎಸ್.ಸಿದ್ದಣ್ಣ ಪಟಾಕಿ ವರ್ತಕರ ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ

ಕೋವಿಡ್‌ನಿಂದಾಗಿ ಜನರು ಹೆದರಿದ್ದಾರೆ. ಹೊರಗಿನಿಂದ ಬರುವವರಿಗೆ ಬಸ್‌ಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಈ ಬಾರಿ ಶೇ. 40ರಷ್ಟು ಮಾತ್ರ ವ್ಯಾಪಾರ ಆಗಬಹುದು.
> ಜಿ.ರಾಘವೇಂದ್ರ ರಾವ್ ಹಿರಿಯ ಪಟಾಕಿ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net