

ದಾವಣಗೆರೆ : ಚನ್ನಗಿರಿ ತಾಲೂಕು ಬಸವಾಪಟ್ಟಣದಲ್ಲಿ ಅ.26ರಂದು ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಹಾಗೂ ವಿವಿ ತಂಡದ ಆಯ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿವಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಹಯೋಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಟಿ. ಮಂಜಣ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶನಿವಾರ ಬೆಳಗ್ಗೆ 6 ಗಂಟೆಗೆ ಬಸವಾಪಟ್ಟಣದ ಪುಣ್ಯಸ್ಥಳದಿಂದ ಗ್ರಾಪಂ ಕಚೇರಿವರೆಗೂ 10 ಕಿಮೀ ಓಟದ ಸ್ಪರ್ಧೆ ನಡೆಯಲಿದೆ. ಅಂದಾಜು 125 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಶಾಸಕ ಕೆ.ಎಸ್. ಬಸವಂತಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಹೊಸಕೆರೆ ಗ್ರಾಪಂ ಅಧ್ಯಕ್ಷ ಬಿ.ಜಿ. ಸಚಿನ್, ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಕ್ರೀಡಾಧಿಕಾರಿ ಡಾ.ಬಿ.ಎಚ್. ವೀರಪ್ಪ ಇತರರು ಭಾಗವಹಿಸಲಿದ್ದಾರೆ ಎಂದರು. ಬೆಳಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ನಡೆಯುವ ಸಮಾರೋಪದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಬಹುಮಾನ ವಿತರಿಸುವರು. ಗ್ರಾಪಂ ಅಧ್ಯಕ್ಷ ಬಿ.ಜಿ. ಸಚಿನ್, ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ದಾವಣಗೆರೆ ವಿವಿ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಪ್ರಭಾರ ನಿರ್ದೇಶಕ ಡಾ.ಕೆ. ವೆಂಕಟೇಶ್, ದೇವಿಹೊಸೂರಿನ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಅಭಯ್ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅ.25ರಂದು ಸಂಜೆ ಸ್ಪರ್ಧೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಿಗೆ ವಸತಿ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ವೀರೇಂದ್ರ, ಉಪಾಧ್ಯಕ್ಷೆ ಡಾ.ಎಂ.ಆರ್. ರೇಖಾ, ಡಾ.ಡಿ. ಆಶಾ, ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.