ನವೆಂಬರ್‌ನಿಂದ ಜಿಲ್ಲಾ ಮಟ್ಟದಲ್ಲಿ ಅದಾಲತ್

dvg-mahiti-ayoga.jpg
Published on

ದಾವಣಗೆರೆ  : ಕರ್ನಾಟಕ ಮಾಹಿತಿ ಆಯೋಗದ ಮುಂದೆ ಬಾಕಿ ಇರುವ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡಲು ನವೆಂಬರ್‌ನಿಂದ ಜಿಲ್ಲಾ ಮಟ್ಟದಲ್ಲಿ ಅದಾಲತ್ ಮಾಡುವ ಉದ್ದೇಶವಿದೆ ಎಂದು ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ಎಸ್. ರಾಜಶೇಖರ್ ಹೇಳಿದರು.  ಜಿಲ್ಲಾಡಳಿತ ಭವನದಲ್ಲಿ ಶನಿವಾರ, ಮಾಹಿತಿ ಹಕ್ಕು ಅಧಿನಿಯಮ-2005 ರ ಕಾಯ್ದೆ ಅಡಿಯಲ್ಲಿ ಬರುವ ಪ್ರಥಮ ಮೇಲ್ಮನವಿ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಪ್ರಾಧಿಕಾರಗಳಿಗೆ ತರಬೇತಿ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಆಯೋಗದ ಮುಂದೆ 2016-17ನೇ ಸಾಲಿನ ಅರ್ಜಿಗಳೂ ವಿಲೇವಾರಿ ಆಗುವುದು ಬಾಕಿ ಇದೆ. ಅದಾಲತ್ ಮಾಡುವುದರಿಂದ ಅಧಿಕಾರಿಗಳ, ಅರ್ಜಿದಾರರ ಹಾಗೂ ಆಯೋಗದ ಸಮಯ ಉಳಿತಾಯವಾಗುತ್ತದೆ ಎಂದು ತಿಳಿಸಿದರು.  ರಾಜ್ಯದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿಗಳ ಸಂಖ್ಯೆ 56 ಸಾವಿರದಿಂದ 46,446ಕ್ಕೆ ಇಳಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು 11428 ಅರ್ಜಿಗಳು ಬಾಕಿ ಇವೆ. ದಾವಣಗೆರೆ ಜಿಲ್ಲೆಯಲ್ಲಿ 624 ಅರ್ಜಿಗಳು ಬಾಕಿ ಇದ್ದವು, ಈಗ ಅವುಗಳ ಸಂಖ್ಯೆ 559 ಇದೆ. ಅರ್ಜಿಗಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ನಮ್ಮ ಗುರಿ ಎಂದು ಹೇಳಿದರು.  ಹೈಕೋರ್ಟ್ ಮಾದರಿಯಲ್ಲಿ ಮಾಹಿತಿ ಆಯೋಗದಲ್ಲಿ ವಿಭಾಗೀಯ ಪೀಠಗಳನ್ನು ಸ್ಥಾಪಿಸುವ ಚಿಂತನೆ ನಡೆದಿದೆ. ನೂರಾರು, ಸಾವಿರಾರು ಸಂಖ್ಯೆಯಲ್ಲಿ ಒಬ್ಬರೇ ಅರ್ಜಿ ಸಲ್ಲಿಸಿದರೆ ಅವುಗಳನ್ನು ಈ ಪೀಠಗಳು ಪರಿಶೀಲಿಸಿ, ಕಪ್ಪು ಪಟ್ಟಿಗೆ ಸೇರಿಸಬೇಕೋ ಅಥವಾ ಅರ್ಜಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕೋ ಎಂಬ ನಿರ್ಧಾರಕ್ಕೆ ಬರಲಾಗುವುದು ಎಂದರು.  ಆರ್.ಟಿ.ಐ ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಈಗಿರುವ ಅರ್ಜಿ ಶುಲ್ಕ, ಮಾಹಿತಿ ಶುಲ್ಕ, ಸಿಡಿಯಲ್ಲಿ ಹಾಕಿ ನೀಡುವ, ಭೌತಿಕವಾಗಿ ಪರಿಶೀಲಿಸುವ ಅವಧಿಯ ಶುಲ್ಕ ಪರಿಶೀಲನೆಗೆ ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.  ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಪಠ್ಯಕ್ರಮದಲ್ಲಿ ಆರ್‌ಟಿಐ ವಿಷಯವನ್ನು ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.  ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಮಾಡುವ ಪ್ರಕರಣಗಳು ಕಳವಳಕಾರಿಯಾಗಿದೆ. ದೇಶದಲ್ಲಿ ಆ ರೀತಿ 60 ಜನರ ಕೊಲೆಯಾಗಿದೆ. ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಅಂಥ ಪ್ರಕರಣಗಳನ್ನು ತಡೆಗಟ್ಟಲು ಗಂಭೀರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net