

ದಾವಣಗೆರೆ : ಬದಲಾವಣೆ ನಮ್ಮಿಂದ ಆರಂಭವಾಗಿ, ಸಮಾಜದಲ್ಲಿ ಪರಿವರ್ತನೆ ತಂದು ದೇಶವನ್ನು ವಿಜಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಬೌದ್ಧಿಕ ಪ್ರಮುಖ್ ಕೃಷ್ಣಪ್ರಸಾದ್ ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಜಯದಶಮಿ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಮನೆ, ಸಮಾಜ, ಆಚಾರ ವಿಚಾರ, ನಡೆ, ನುಡಿಯಲ್ಲಿ ಬದಲಾವಣೆಯಾದಾಗ ಒಟ್ಟಾರೆ ಪರಿವರ್ತನೆಗೆ ದಾರಿಯಾಗುತ್ತದೆ ಎಂದರು. ದೇಶದಲ್ಲಿ ಪ್ರಾದೇಶಿಕವಾದ, ಸಂಕುಚಿತ ಮನೋಭಾವವನ್ನು ಬಿತ್ತಲಾಗುತ್ತಿದೆ. ದೇಶದೊಳಗೆ ಪರ ರಾಷ್ಟ್ರವನ್ನು ಕಟ್ಟುವ ಸಂಚು ನಡೆಯುತ್ತಿದೆ. ಇಂಥ ಬೆಳವಣಿಗೆಗೆ ಕಾರಣವಾದ ಶತ್ರುಗಳನ್ನು ಸೋಲಿಸುವ ಕೆಲಸ ಆಗಬೇಕಿದೆ. ನಾವೆಲ್ಲ ಒಂದು. ದೇಶ ಮೊದಲು ಎನ್ನುವ ಭಾವ ವಿಕಾಸವಾಗಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ತಿಳಿಸಿದರು. ನಮ್ಮ ಪರಂಪರೆ, ಆಚರಣೆಗಳನ್ನು ಸುಳ್ಳೆಂದು, ಮೂಢ ನಂಬಿಕೆಯೆಂದು ಬಿಂಬಿಸುವ ಶಕ್ತಿಗಳಿವೆ. ವಿತಂಡ ವಾದ ಮಾಡಿ ಮನಸ್ಸನ್ನು ಕೆಡಿಸಲಾಗುತ್ತಿದೆ. ಅಂಥ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು. ಬಸವಣ್ಣ, ನಾರಾಯಣ ಗುರು, ತಿರುವಳ್ಳರ್ ಅವರಂಥ ಮಹನೀಯರು ಸಮಾಜ ಪರಿವರ್ತನೆ ಮಾಡಲು ಪ್ರಯತ್ನಿಸಿದರು. ಇದನ್ನು ಅರಿಯದೇ ಇಡೀ ವ್ಯವಸ್ಥೆ ಸರಿಯಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಾವು ದುರ್ಬಲರಾಗಬಾರದು. ನಮ್ಮ ಶಕ್ತಿಯನ್ನು ನಾವೇ ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಹಾಗೂ ಮನಸ್ಸಿನ ಮೇಲಿನ ಆಕ್ರಮಣವನ್ನು ಗೆಲ್ಲಬೇಕು. ವಿಜಯ ದಶಮಿಯ ಈ ಸಂದರ್ಭದಲ್ಲಿ ಅಂಥ ಸಂಕಲ್ಪ ಮಾಡಬೇಕು. ಜಾತಿಯ ಸಂಕುಚಿತತೆಯಿಂದ ಹೊರ ಬಂದು ಸಮಾಜದ ಪ್ರೀತಿಯನ್ನು ಗಳಿಸಬೇಕು ಎಂದು ಹೇಳಿದರು. ಪರಿಸರ ಸಂರಕ್ಷಣೆಯ ಮೂಲಕವೂ ದೇಶ ಸೇವೆ ಮಾಡಲು ಸಾಧ್ಯವಿದೆ. ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕು. ಮನೆಯ ಕಸವನ್ನು ರಸ್ತೆಗೆ ಸುರಿಯದೇ ಸರಿಯಾಗಿ ವಿಲೇವಾರಿ ಮಾಡುವ ಮೂಲಕ ಜವಾಬ್ದಾರಿ ಪ್ರದರ್ಶಿಸಬೇಕು. ನಮ್ಮಲ್ಲಿ ಭಾಷಾ ಪ್ರೇಮ ಇರಬೇಕು ಎಂದು ತಿಳಿಸಿದರು. ನಮಗೆ ದೊಡ್ಡ ಜ್ಞಾನ ಪರಂಪರೆ ಇದೆ. ರಾಮಾಯಣ, ಮಹಾಭಾರತ, 18 ಪುರಾಣಗಳ ಭಂಡಾರವಿದೆ. ಇಡೀ ಜಗತ್ತಿಗೇ ಜ್ಞಾನವನ್ನು ನೀಡಿದ ದೇಶ ನಮ್ಮದು. ಪರಶುರಾಮ, ಅರ್ಜುನ, ಶಿವಾಜಿ ಅವರಂಥ ಮಹನೀಯರು ಉದಯಿಸಿದ ಮಣ್ಣಿದು. ಇಂಥ ಶ್ರೇಷ್ಠ ಪರಂಪರೆಯನ್ನು ನಾವು ಮರೆತಿದ್ದೇವೆ ಎಂದು ವಿಷಾದಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಈಗ ನೂರು ವರ್ಷಗಳಾಗುತ್ತಿವೆ. ಹಿಂದು ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸಂಘಕ್ಕಿದೆ. ಮಾತೃತ್ವದ ಕಲ್ಪನೆಯನ್ನು ಜಾಗೃತಗೊಳಿಸಿದ್ದು, ದೇಶ ಸೇವೆಯ ಪ್ರೇರಣೆ ನೀಡಿದ್ದು ಆರ್‌ಎಸ್‌ಎಸ್ ಎಂದು ಹೇಳಿದರು. ಸಂಘದ ಉದಯವಾದಾಗ ಅದು ಇಷ್ಟರಮಟ್ಟಿಗೆ ಬೆಳೆಯಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಈಗ ದೇಶ ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿರುವುದು ದೊಡ್ಡ ಸಾಧನೆಯಾಗಿದೆ ಎಂದರು. ಉದ್ಯಮಿ ಕಣಕುಪ್ಪಿ ಮುರುಗೇಶಪ್ಪ ಮಾತನಾಡಿ, ನಾವೆಲ್ಲ ಹಿಂದುತ್ವವನ್ನು ರಕ್ಷಿಸುವ ಸಂಕಲ್ಪ ಮಾಡಬೇಕಿದೆ, ಈ ನಿಟ್ಟಿನಲ್ಲಿ ಜನಜಾಗೃತಿ ಆಗಬೇಕಿದೆ ಎಂದು ಹೇಳಿದರು. ಆರ್‌ಎಸ್‌ಎಸ್‌ನ ಜಿಲ್ಲಾ ಸಂಘಚಾಲಕ ಜಯರುದ್ರೇಶ್ ಇದ್ದರು. ...