

ದಾವಣಗೆರೆ : ಸಮಾಜ ಸೇವೆ ಮಾಡಲು ರೋಟರಿ ಸಂಸ್ಥೆ ಅತ್ಯುತ್ತಮ ಅವಕಾಶವಾಗಿದೆ ಎಂದು ರೋಟರಿ ಜಿಲ್ಲೆ 3160 ಜಿಲ್ಲಾ ಗವರ್ನರ್ ಡಾ. ಸಾಧು ಗೋಪಾಲಕೃಷ್ಣ ಹೇಳಿದರು. ವಿದ್ಯಾನಗರ ರೋಟರಿ ಕ್ಲಬ್ ಸಂಸ್ಥೆಗೆ ಶನಿವಾರ ಭೇಟಿ ನೀಡಿ, ಸಂಸ್ಥೆಯ ಕಳೆದ 9 ತಿಂಗಳ ಸಾಮಾಜಿಕ ಕಾರ್ಯಗಳ ಪರಿಶೀಲನೆ ಕೈಗೊಂಡು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಸಂಸ್ಥೆ ಗೆಳೆತನ ಹಾಗೂ ಸಹಭಾಗಿತ್ವ ತತ್ವಗಳಿಗೆ ಮಹತ್ವ ಕೊಡುತ್ತಿದೆ. ಸದಸ್ಯರು ಅವುಗಳನ್ನು ಪಾಲಿಸುವ ಮೂಲಕ ಸಮಾಜ ಸೇವೆ ಮಾಡಬಹುದು. ಇದರಿಂದ ಮಾನಸಿಕ ನೆಮ್ಮದಿ ಪಡೆದು ಆರೋಗ್ಯವಂತ ಜೀವನ ನಡೆಸಬಹುದಾಗಿದೆ ಎಂದು ತಿಳಿಸಿದರು. ರೋಟರಿ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಳೆದ 9 ತಿಂಗಳಗಳಲ್ಲಿ ಸಂಸ್ಥೆ ಆರೋಗ್ಯ ಕ್ಷೇತ್ರ, ಮೂಲಸೌಲಭ್ಯ ಹಾಗೂ ಪ್ರಾಥಮಿಕ ಶಿಕ್ಷಣ, ಪೋಲಿಯೋ ನಿರ್ಮೂಲನೆ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ ಸಲ್ಲಿಸಿದರು. ಸಂಸ್ಥೆಯು 27 ವರ್ಷಗಳಲ್ಲಿ ಅತಿ ಹೆಚ್ಚು ಸಾರ್ವಜನಿಕ ವಂತಿಗೆ (10 ಲಕ್ಷ ) ಪಡೆದುಕೊಂಡಿದ್ದು ಅದನ್ನು ಬಳಸಿಕೊಂಡು ಮುಂಬರುವ ದಿನಗಳಲ್ಲಿ ಆರೋಗ್ಯ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಅನುದಾನ ಯೋಜನೆ ರೂಪಿಸಲಾಗುವುದು ಎಂದರು. ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್.ಎಂ. ಚಂದ್ರಾಚಾರ್ಯ, ಉಪ ಗವರ್ನರ್ ಎಂ.ಎನ್. ಬಿಲ್ಲಳ್ಳಿ ವೇದಿಕೆಯಲ್ಲಿದ್ದರು. ಡಾ. ಜೆ.ಬಿ. ರಾಜ್ ವಂದಿಸಿದರು. ಎಂ.ಬಿ. ಚಂದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಎಲ್ಲ ಸದಸ್ಯರು ಭಾಗವಹಿಸಿದ್ದರು.