ರೋಟರಿ ಸಂಸ್ಥೆಗೆ ಗೆಳೆತನ, ಸದ್ಭಾವನಾ ತತ್ವಗಳೇ ಆಧಾರ

dvg-rotary-08.jpg
Published on

ದಾವಣಗೆರೆ : ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಗೆಳೆತನ ಹಾಗೂ ಸದ್ಭಾವನಾ ತತ್ವಗಳ ಮೇಲೆ ರಚನೆಯಾಗಿ ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಹೇಳಿದರು.  ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಗೆಳೆತನ ದಿನಾಚರಣೆ (ಫ್ರೆಂಡ್‌ಶಿಪ್ ಡೇ) ಕಾರ್ಯಕ್ರಮದ ಲ್ಲಿ ಮಾತನಾಡಿದರು.  ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಅವರ ಕೆಲಸದ ಜವಾಬ್ದಾರಿ ಹೆಚ್ಚಿಸುವುದು ರೋಟರಿಯ ಉದ್ದೇಶವಾಗಿದೆ. ರೋಟರಿಯ ಈ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಸ್ಥೆಯವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.  ಮಹಾನಗರ ಪಾಲಿಕೆಯ ಆರೋಗ್ಯ ಸಹಾಯಕ ಹರೀಶ್ ಮತ್ತು ದಫೇದಾರ್ ಗಜೇಂದ್ರ ಸೇರಿ 9 ಜನ ಪೌರ ಕಾರ್ಮಿಕರನ್ನು ಹಾಗೂ ನಾಲ್ಕು ಜನ ಮೇಲ್ವಿಚಾರಕರನ್ನು, ಪ್ರೋತ್ಸಾಹಕರಾದ ರೊಟೇರಿಯನ್ ದಂಪತಿಗಳನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.  ಪರಶುರಾಮ್ ಮಾತನಾಡಿ, ರೋಟರಿಯ ‘ಸ್ವಂತಕ್ಕಿಂತ ಮೊದಲು ಸೇವೆ’ ಎನ್ನುವ ಧ್ಯೇಯದಂತೆ ಪೌರಕಾರ್ಮಿಕರನ್ನು ಸನ್ಮಾನಿಸಲಾಗಿದೆ ಎಂದು ಹೇಳಿದರು.  ರೊಟೇರಿಯನ್‌ಗಳಾದ ಜಿ. ಮುರುಗೇಂದ್ರಪ್ಪ, ಬೆಳಗಿನ ವಾಯುವಿಹಾರ ಬಳಗದ ಅಧ್ಯಕ್ಷ ಕೆ. ನಾಗಪ್ಪ, ಮಾಜಿ ಮೇಯರ್ ಎಂ.ಎಸ್. ವಿಠ್ಠಲ್, ಪ್ರೇಮಾ ಮಹೇಶ್ವರಪ್ಪ, ಭಾಗ್ಯಾ ವೀರಣ್ಣ ಮಾತನಾಡಿದರು.  ಕ್ಲಬ್ ಕಾರ್ಯದರ್ಶಿ ಎಚ್. ಆಂಜನೇಯ ಮೂರ್ತಿ, ಖಜಾಂಚಿ ಎಂ.ಬಿ. ಚಂದ್ರಪ್ಪ, ಉಪ ಗವರ್ನರ್ ಎಂ.ಎನ್. ಬಿಲ್ಲಳ್ಳಿ, ಹಿರಿಯ ಸದಸ್ಯರು ಹಾಗೂ ರೊಟೇರಿಯನ್‌ಗಳಾದ ಪಿ. ಪರಶುರಾಮ್, ಕುರ್ಕಿ ಜಿ.ಬಿ. ಸಿದ್ದಪ್ಪ, ಜಿ. ಮುರುಗೇಂದ್ರಪ್ಪ, ಎಚ್.ಎಂ. ಚಂದ್ರಾಚಾರ್ಯ, ದಯಾನಂದ ಎಚ್. ರಾಮಗೊಂಡನಹಳ್ಳಿ, ರೋಟರಿ ಸದಸ್ಯರು, ನಗರದ ಇತರೆ ರೋಟರಿ ಕ್ಲಬ್ ಸದಸ್ಯರು, ವಾಯುವಿಹಾರ ಬಳಗದವರು, ಶಿವಸಿಂಪಿ ಸಮಾಜದ ಮುಖಂಡರು ಇದ್ದರು. ಅಂಜನಪ್ಪ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net